Advertisement

ರಾಜ್ಯ ಸಾರಿಗೆ ಇಲಾಖೆಯಲ್ಲಿ 4000 ಕೋಟಿ ಹಣ ಸೋರಿಕೆ: ಸವದಿ ಕಳವಳ

09:04 AM Mar 01, 2020 | sudhir |

ಕಾರವಾರ : ಸಾರಿಗೆ ಇಲಾಖೆಯಲ್ಲಿ ಹೆಚ್ಚಿನ ಹಣ ಸೋರಿಕೆಯಾಗುತ್ತಿದ್ದು, ರಾಜ್ಯದ ಸಾರಿಗೆ ನಿಗಮಗಳು 4000 ಕೋಟಿ ನಷ್ಟದಲ್ಲಿದೆ ಎಂದು ಉಪ ಮುಖ್ಯಮಂತ್ರಿ,ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಳವಳ ವ್ಯಕ್ತಪಡಿಸಿದರು.

Advertisement

ಶನಿವಾರ ಜಿಲ್ಲೆಯ ಹೊನ್ನಾವರ ತಾಲೂಕಿನ ನೂತನ ಬಸ್ ನಿಲ್ದಾಣದ ಶಂಕು ಸ್ಥಾಪನೆ ನೆರವೇರಿಸಿ, ನಂತರ ಮಾತನಾಡಿದ ಅವರು ಹಣ ಸೋರಿಕೆಯಾಗುತ್ತಿರುವುದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಸಾರಿಗೆ ಇಲಾಖೆಯನ್ನು ಸರಿದಾರಿಗೆ ತರುವುದರ ಮೂಲಕ ಲಾಭದಾಯಕ ವಾಗುವಂತೇ ಮಾಡುತ್ತೇನೆ ಎಂದರು.

ಉತ್ತರ ಕನ್ನಡವನ್ನು ಬಲಿಷ್ಠ ಜಿಲ್ಲೆಯಾಗಿ ನಿರ್ಮಾಣ ಮಾಡುವುದರ ಜೊತೆಗೆ ಜನತೆಗೆ ಎಲ್ಲಿಯೂ ಅನ್ಯಾಯವಾಗದಂತೇ ನೋಡಿಕೊಳ್ಳುತ್ತೇನೆ. ಟೋಲ್ ಗೆ ಸಂಬಂಧಿಸಿದ ಸಮಸ್ಯೆಯನ್ನು ಶೀಘ್ರ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ, ಬಸ್ ನಿಲ್ದಾಣಗಳು, ವಸತಿ ಸೇರಿದಂತೆ ,ಅನೇಕ ಸಮಸ್ಯೆಗಳಿದ್ದು ಜನತೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಡುವುದಾಗಿ ತಿಳಿಸಿದರು. ಅಧಿಕಾರದಲ್ಲಿರುವಷ್ಟು ಅವಧಿ ಜನರ ಸೇವೆಗೆ ಸದಾ ಸಿದ್ಧನಾಗಿರುತ್ತೇನೆ. ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೇ ಅನೇಕ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಟಾ-ಹೊನ್ನಾವರ ಶಾಸಕ‌ ದಿನಕರ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿರುವ ಕುಂದು ಕೊರತೆಗಳನ್ನು ಉಪಮುಖ್ಯಮಂತ್ರಿಗಳಿಗೆ ವಿವರಿಸಿ, ಜಿಲ್ಲೆಯ ಅಭಿವೃದ್ಧಿಯು ಮಂದಗತಿಯಲ್ಲಿ ಸಾಗುತ್ತಿದ್ದು, ಜಿಲ್ಲೆಯು ಹಲವಾರು ವರ್ಷಗಳಿಂದ ನಿಲಕ್ಷ್ಯಕ್ಕೆ ಒಳಗಾಗಿದೆ. ಇ ಸ್ವತ್ತು ಬಹಳ ದೊಡ್ಡ ಸಮ್ಯಸೆಯಾಗಿ ಜನರನ್ನು ಕಾಡುತ್ತಿದ್ದು ಇದಕ್ಕೆ ಸೂಕ್ತ ಪರಿಹಾರದ ಅಗತ್ಯವಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಅವುಗಳು ನಿರ್ದಿಷ್ಟ ಅವಧಿಯಲ್ಲಿ ಕಾರ್ಯಗತಗೊಳಿಸಲು ಉಪಮುಖ್ಯಮಂತ್ರಿಗಳ ಹತ್ತಿರ ಮನವಿ ಮಾಡಿಕೊಂಡರು.‌‌

Advertisement

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾದ ವಿ.ಎಸ್ ಪಾಟೀಲ್ ಮಾತನಾಡಿ ಸರ್ಕಾರಿ ಬಸ್ ವ್ಯವಸ್ಥೆಯಿಂದಾಗಿ ಜನರು ಚಟುವಟಿಕೆಯಿಂದಿರಲು ಸಾಧ್ಯವಾಗಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೇವೆಯಿಂದ ಬಹಳಷ್ಟು ಪ್ರಯೋಜನವಾಗಿದೆ. ಸರ್ಕಾರಿ ಬಸ್ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಜಿಲ್ಲೆಯ ಯುವಕ-ಯುವತಿಯರು ಉದ್ಯೋಗ ಅವಕಾಶದಿಂದ ವಂಚಿತರಾಗಿದ್ದು ಈ ಬಗ್ಗೆ ಗಂಭೀರವಾದ ಕ್ರಮಗಳನ್ನು ಕೈಗೂಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಯಾವುದೇ ಯೋಜನೆಯನ್ನು ಜಾರಿಗೆ ತಂದರು ಅದರಿಂದ ಸ್ಥಳೀಯ ಯುವಕರು ಉದ್ಯೋಗ ಪಡೆಯುವಂತಾಗಬೇಕು ಎಂದರು. ಜೊತೆಗೆ ಟೂಲ್‌ ನಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತಿದ್ದು ಸಾರ್ವಜನಿಕರಿಗೂ ಅತಿಯಾದ ಭಾರವಾಗಿದೆ. ಈ ಕುರಿತು ಕೂಲಕುಂಷವಾಗಿ ಪರಿಶೀಲನೆಯನ್ನು ನಡೆಸಿ ಸಾರ್ವಜನಿಕರಿಗೆ ನ್ಯಾಯವನ್ನು ಒದಗಿಸಬೇಕು ಎಂದು ಉಪಮುಖ್ಯಮಂತ್ರಿಗಳ ಬಳಿ ತಮ್ಮ ಜಿಲ್ಲೆಯ ಅಳಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಪಂಚಾಯತ್ ಸದಸ್ಯರು ಮತ್ತಿತರು ಉಪಸ್ಥಿತರಿದ್ದರು. ವಿ.ಐ ಹೆಗಡೆ ಸ್ವಾಗತಿಸಿದರು. ಪ್ರಶಾಂತ ಹೆಗಡೆ ನಿರೂಪಿಸಿದರು. ಪ್ರಕಾಶ್ ನಾಯ್ಕ್ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next