ಬೆಂಗಳೂರು: ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಕರ್ನಾಟಕ “ದಾಖಲೆ ಹ್ಯಾಟ್ರಿಕ್’ ಸಾಧನೆ ಮಾಡಿದೆ
ಕಳೆದ ಜನವರಿಯಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ಬರೋಬ್ಬರಿ 1.47 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಮೂಲಕ ರಾಜ್ಯ ಸತತ ಮೂರನೇ ಬಾರಿಗೆ ನಂಬರ್ 1 ಆಗಿ ಹೊಸ ದಾಖಲೆ ಸೃಷ್ಟಿಸಿದೆ. ಅಲ್ಲದೆ, ಗುಜರಾತ್ ರಾಜ್ಯವನ್ನು ಹಿಂದಿಕ್ಕಿದೆ.
ಇಲಾಖೆ ದಾಖಲೆಗಳ ಪ್ರಕಾರ 65,741 ಕೋಟಿ ರೂ. ಬಂಡವಾಳ ಆಕರ್ಷಿಸಿರುವ ಗುಜರಾತ್ ಎರಡನೇ ಸ್ಥಾನದಲ್ಲಿದ್ದರೆ, 25,018 ಕೋಟಿ ರೂ. ಮೂಲಕ ಮಹಾರಾಷ್ಟ್ರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಕ್ರಮವಾಗಿ 24,013 ಕೋಟಿ ರೂ. ಹಾಗೂ 12,567 ಕೋಟಿ ರೂ. ಹೂಡಿಕೆಯೊಂದಿಗೆ ಅನಂತರದ ಎರಡು ಸ್ಥಾನ ಪಡೆದಿವೆ.
“ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 2017ರ ಜನವರಿಯಿಂದ ಸೆಪ್ಟಂಬರ್ ವರೆಗಿನ ಅವಧಿಯ ಬಂಡವಾಳ ಆಕರ್ಷಣೆಯ ವಿವರ ಬಿಡುಗಡೆ ಮಾಡಿದೆ. ಕರ್ನಾಟಕ 1,47,625 ಕೋಟಿ ರೂ. ಬಂಡವಾಳ ಆಕರ್ಷಿಸಿ ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿರುವುದು ಸಂತಸ ತಂದಿದೆ’ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಸಂತಸ ವ್ಯಕ್ತಪಡಿಸಿದರು.
ಮಾಧ್ಯಮಗಳ ಜತೆ ಈ ಮಾಹಿತಿ ಹಂಚಿ ಕೊಂಡ ಸಚಿವರು, “ಮುಖ್ಯಮಂತ್ರಿ ಮತ್ತು ಸಂಪುಟ ಸಹೋದ್ಯೋಗಿಗಳ ಸಹಕಾರ, ಮಾರ್ಗದರ್ಶನ, ಅಧಿಕಾರಿಗಳ ಶ್ರಮದಿಂದಾಗಿ ಈ ಸಾಧನೆ ಸಾಧ್ಯವಾಗಿದೆ’ ಎಂದರು.
“ನಮ್ಮ ಸರಕಾರದ ನೂತನ ಕೈಗಾರಿಕಾ ನೀತಿ, ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್ ಅಪ್ ನೀತಿಗಳು, ಏಕ ಗವಾಕ್ಷಿ ವ್ಯವಸ್ಥೆ, ಸಕಾಲ ಯೋಜನೆ, ಕೈಗಾರಿಕೆಗೆ ಪೂರಕವಾಗಿ ಕೈಗೊಂಡಿರುವ ಕ್ರಮಗಳ ಫಲವಾಗಿ ಕರ್ನಾಟಕ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದೆ’ ಎಂದು ತಿಳಿಸಿದರು.