ಬೆಂಗಳೂರು: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಸ್ವರ್ಣ ಮಳೆ ಸುರಿಸುತ್ತಿದ್ದರೆ ಇತ್ತ ರಾಜ್ಯದಲ್ಲಿ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಚುನಾವಣೆ ಗದ್ದಲದಲ್ಲಿ ಅಥ್ಲೀಟ್‌ಗಳನ್ನೇ ಕಡೆಗಣಿಸಿದೆ. ಅಧಿಕಾರಕ್ಕಾಗಿ ತಮ್ಮತಮ್ಮೊಳಗೆ ಕಚ್ಚಾಡುತ್ತಿರುವ
ಅಧಿಕಾರಿಗಳು ರಾಷ್ಟ್ರೀಯ ಕೂಟವನ್ನೇ ಮರೆತು ಕರ್ತವ್ಯ ಲೋಪ ಎಸಗಿದ್ದಾರೆ ಎನ್ನುವ ಟೀಕೆ ಕೇಳಿ ಬಂದಿದೆ. ನಿರ್ಲಕ್ಷ್ಯದ ಪರಿಣಾಮ 20 ವರ್ಷ ವಯೋಮಿತಿ ಯೊಳಗಿನ ಅಥ್ಲೀಟ್‌ಗಳು ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕೂಟವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ರಾಷ್ಟ್ರೀಯ ಕೂಟ ಕಳೆದುಕೊಂಡರೆ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಕೂಟ ಹಾಗೂ ಜಪಾನ್‌ನಲ್ಲಿ ನಡೆಯಲಿರುವ
ದಕ್ಷಿಣ ಏಷ್ಯನ್ ಕೂಟಕ್ಕೆ ಅರ್ಹತೆ ಪಡೆಯಲು ರಾಜ್ಯ ಕ್ರೀಡಾಪಟುಗಳಿಗೆ ಸಾಧ್ಯವಾಗುವುದಿಲ್ಲ. ಈ ಬಗ್ಗೆ ತತ್‌ಕ್ಷಣದ ವರೆಗೆ ಯಾವುದೇ
ಅಧಿಕೃತ ಪ್ರತಿಕ್ರಿಯೆಗಳು ಎಎಫ್ಐನಿಂದ ಹೊರಬಿದ್ದಿಲ್ಲ. ಉದಯವಾಣಿಗೆ ಸಿಕ್ಕಿರುವ ಮೂಲಗಳ ಮಾಹಿತಿ ಪ್ರಕಾರ ಡೆಡ್‌ಲೈನ್ ಮೀರಿರುವು ದರಿಂದ ಕರ್ನಾಟಕದ ಅಥ್ಲೀಟ್ ಗಳ ಪಟ್ಟಿ ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಎಎಫ್ಐ (ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ) ಖಡಕ್ ಆಗಿ ತಿಳಿಸಿದೆ ಎನ್ನಲಾಗಿದೆ.
32 ಮಂದಿ ಅಥ್ಲೀಟ್ಸ್ ಅತಂತ್ರ: ಏಪ್ರಿಲ್ 20, 21, 22 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟ ಆಯೋಜಿಸಲಾಗಿದೆ. ಇದಕ್ಕೆ ಕರ್ನಾಟಕ ದಿಂದ 16 ಬಾಲಕರು, 16 ಬಾಲಕಿಯರ ತಂಡವನ್ನು ಪ್ರಕಟಿಸಲಾಗಿತ್ತು. ಏ.9ರಂದು ಸಂಜೆ 5 ಗಂಟೆಯೊಳಗೆ ತಂಡದ ಪಟ್ಟಿ ಪ್ರಕಟಿಸಲು ಎಎಫ್ಐ ತಿಳಿಸಿತ್ತು. ಆದರೆ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಈ ಗಡುವಿನೊಳಕ್ಕೆ ಪಟ್ಟಿ ಕಳುಹಿಸಲು ವಿಫಲವಾಗಿದ್ದೆ ವಿವಾದಕ್ಕೆ ಕಾರಣ.
ಅಧಿಕಾರಿಗಳ ನಿರ್ಲಕ್ಷ್ಯ: ಯಾವುದೇ ಕೂಟ ಆಗುವ 20 ದಿನಕ್ಕೆ ಮೊದಲೇ ಎಎಫ್ಐಗೆ ಪ್ರವೇಶ ಪಟ್ಟಿ ಕಳುಹಿಸಿ ಪಾಲ್ಗೊಳ್ಳುವಿಕೆ ಖಚಿತಪಡಿಸಿಕೊಳ್ಳಬೇಕು. ರಾಜ್ಯದ ಅಥ್ಲೆಟಿಕ್ಸ್ ಸಂಸ್ಥೆ ಕಾರ್ಯದರ್ಶಿ ಇದರ ಜವಾಬ್ದಾರಿ ಹೊತ್ತಿರುತ್ತಾರೆ. ಸದ್ಯ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಗೆ ಚುನಾವಣೆ ನಡೆದಿದ್ದು ಗೊಂದಲದ ನಡುವೆ ಯಾರು ಅಧ್ಯಕ್ಷ, ಕಾರ್ಯದರ್ಶಿ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತಂತೆ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆಯನ್ನು ಅಥ್ಲೆಟಿಕ್ಸ್ ಸಂಸ್ಥೆ ಹೊರಡಿಸಿಲ್ಲ. ಈ ನಡುವೆ ಚಂದ್ರಶೇಖರ್ ರೈ ನಾನು ಕಾರ್ಯದರ್ಶಿ ಅಲ್ಲ. ಯಾವುದೇ ಹೇಳಿಕೆಯನ್ನು ಮಾಧ್ಯಮದ ಎದುರು ನೀಡಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಸಿಬ್ಬಂದಿ ದೋಷದಿಂದ ಎಡವಟ್ಟು: ರೈ ಹೇಳಿಕೆ ಇದೇ ವೇಳೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಕಾರ್ಯಕಾರಿ ಸದಸ್ಯ ಚಂದ್ರಶೇಖರ್ ರೈ ಉದಯವಾಣಿಗೆ ಪ್ರತಿ ಕ್ರಿಯೆ ನೀಡಿ ಹೇಳಿದ್ದು ಹೀಗೆ..ನಾನು ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಕಾರ್ಯದರ್ಶಿಯಾಗಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಚುನಾವಣೆ ನಡೆದಿದ್ದು ಶೀಘ್ರದಲ್ಲೇ ಹೊಸ ಅಧ್ಯಕ್ಷ, ಕಾರ್ಯದರ್ಶಿ ಹೆಸೆರನ್ನು ಪ್ರಕಟಿಸಲಾಗುತ್ತದೆ. ಇದಕ್ಕೆ ಕಾನೂನು ತೊಡಕು ಉಂಟಾಗಿದ್ದರಿಂದ ಪತ್ರಿಕಾ ಪ್ರಕಟಣೆ ಹೊರಡಿಸಿಲ್ಲ ಎಂದು ತಿಳಿಸಿದರು. ಇದೇ ವೇಳೆ ಮಾತು ಮುಂದುವರಿಸಿದ ಅವರು,
ಅಥ್ಲೀಟ್‌ಗಳ ಎಂಟ್ರಿ ತಡವಾಗಿ ಕಳುಹಿಸಿದ್ದೇವೆ. ಇದಕ್ಕೆ ಕಾರಣ ನಮ್ಮ ಸಂಸ್ಥೆಯ ಕಂಪ್ಯೂಟರ್ ಸರಿ ಇರಲಿಲ್ಲ. ಕೊನೆ ಕ್ಷಣದಲ್ಲಿ ಇಂಟರ್ನೆಟ್ ಕೈಕೊಟ್ಟಿತು. ಅಷ್ಟೇ ಅಲ್ಲ ಸಿಬ್ಬಂದಿ ಎಡವಟ್ಟು ಕೂಡ ಕಾರಣ. ಆದರೆ ಅಥ್ಲೀಟ್‌ಗಳಿಗೆ ತೊಂದರೆಯಾಗದಂತೆ ಕ್ರಮ
ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಎಎಫ್ಐ ಹೊಸ ಪದ್ಧಯಲ್ಲಿ ಅಥ್ಲೀಟ್ ಗಳ ಮಾಹಿತಿ ನೀಡುವಂತೆ ಕೇಳಿತ್ತು. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಅಧಿಕಾರಿಗಳಿಗೆ ಸ್ವಲ್ಪ ಕಷ್ಟವಾಗಿದೆ. ಕಂಪ್ಯೂಟರ್‌ನಲ್ಲಿ ಹೊಸ ಪದ್ಧತಿ ಬಗ್ಗೆ ಅರಿಯಲು ಸಮಯಬೇಕು.
● ರಾಜವೇಲು, ರಾಜ್ಯ ಅಥ್ಲೆಟಿಕ್ಸ್ ತಾಂತ್ರಿಕ ಸಮಿತಿ ಮುಖ್ಯಸ್ಥ
ಹೇಮಂತ್ ಸಂಪಾಜೆ