ಗುಂಡ್ಲುಪೇಟೆ(ಚಾಮರಾಜನಗರ): ಕಾವೇರಿ ಕಿಚ್ಚು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಇಂದು(ಸೆ.26) ಬೆಂಗಳೂರು ಬಂದ್ ಗೆ ವಿವಿಧ ಸಂಘಟನೆಗಳು ಕರೆಕೊಟ್ಟ ಹಿನ್ನಲೆ ತಮಿಳುನಾಡು ಸರ್ಕಾರ ಟಿಎನ್(ತಮಿಳುನಾಡು) ನೋಂದಣಿಯ ವಾಹನಗಳು ಕರ್ನಾಟಕಕ್ಕೆ ತೆರಳದಂತೆ ಗಡಿಯಲ್ಲಿ ನಿರ್ಬಂಧ ಹೇರಿದೆ.
ಬೆಂಗಳೂರು ಬಂದ್ ಹಿನ್ನಲೆ ಮುನ್ನೆಚ್ವರಿಕೆ ಕ್ರಮವಾಗಿ ಗುಂಡ್ಲುಪೇಟೆ ತಾಲೂಕಿನ ಕರ್ನಾಟಕ-ತಮಿಳುನಾಡು ಗಡಿ ಕೆಕ್ಕನಹಳ್ಳ ಚೆಕ್ ಪೋಸ್ಟ್ ಮೂಲಕ ಸಂಚಾರ ಮಾಡುವ ಎಲ್ಲಾ ರೀತಿಯ ತಮಿಳುನಾಡು ವಾಹನ ಸಂಚಾರಕ್ಕೆ ಅಲ್ಲಿನ ಜಿಲ್ಲಾಡಳಿತ ನಿರ್ಬಂಧ ಹಾಕಿದ್ದು, ಗಡಿಗೆ ಬರುವ ತಮಿಳುನಾಡು ನೋಂದಣಿ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ.
ಬೆಳಗ್ಗೆ 8:30 ರವರೆಗೆ ಸಂಪೂರ್ಣ ವಾಹನ ನಿರ್ಬಂಧ: ಸೆ.26ರ ಬೆಳಗ್ಗೆ 6 ಗಂಟೆಯಿಂದ 8:30ರವರೆಗೆ ಕರ್ನಾಟಕ-ತಮಿಳುನಾಡಿ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಮಾಹಿತಿ ಅರಿವಿಲ್ಲದೆ ಹಲವು ವಾಹನ ಸವಾರರು ಗುಂಡ್ಲುಪೇಟೆ ಮೂಲಕ ಕರ್ನಾಟಕದ ಗಡಿ ಕೆಕ್ಕನಹಳ್ಳಿ ಚೆಕ್ ಪೋಸ್ಟ್ ಗೆ ತೆರಳಿ ವಾಪಸ್ಸಾದರು. ಇನ್ನು ತಮಿಳುನಾಡಿಗೆ ತೆರಳುವ ತರಕಾರಿ ತುಂಬಿದ ಸರಕು ಸಾಗಣೆ ಲಾರಿಗಳು ಚೆಕ್ ಪೋಸ್ಟ್ ಆಸುಪಾಸು ಕಿ.ಮೀ ದೂರದವರೆಗೆ ನಿಂತಿದ್ದವು.
ಬೆಳಗ್ಗೆ 8:30ರ ನಂತರ ಕರ್ನಾಟಕದಿಂದ ಸಂಚಾರ ಮಾಡುವ ಎಲ್ಲಾ ವಾಹನಗಳ ಸಂಚಾರಕ್ಕೆ ತಮಿಳುನಾಡು ಸರ್ಕಾರ ಅನುವು ಮಾಡಿದ ಹಿನ್ನಲೆ ವಾಹನ ಸಂಚಾರ ಯಥಾಸ್ಥಿತಿಗೆ ಮರಳಿತು.
ಸ್ಥಳದಲ್ಲಿ ಪೊಲೀಸರ ಮೊಕ್ಕಾಂ: ಕರ್ನಾಟಕ-ತಮಿಳುನಾಡಿ ಗಡಿ ಕೆಕ್ಕನಹಳ್ಳ ಚೆಕ್ ಪೋಸ್ಟ್ ಬಂದ್ ಮಾಡಿದ ಹಿನ್ನಲೆ ಗುಂಡ್ಲುಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ ನೇತೃತ್ವದ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿ, ಪರಿಸ್ಥಿತಿ ತಿಳಿಗೊಳಿಸಿ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಿದರು.