Advertisement

ಕರ್ನಾಟಕ, ತ.ನಾಡು ತಮ್ಮ ಪಾಲನ್ನು ಉಪಯೋಗಿಸಲು ಯಾವುದೇ ಅಡ್ಡಿ ಇಲ್ಲ: ಸಿ.ಟಿ.ರವಿ

08:56 PM Aug 12, 2021 | Team Udayavani |

ಬೆಂಗಳೂರು: ಕಾವೇರಿ ಜಲವಿವಾದ ಸಂಬಂಧ ಹಲವು ತೀರ್ಪುಗಳ ವ್ಯಾಪ್ತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ಪಾಲನ್ನು ಉಪಯೋಗಿಸಲು ಯಾವುದೇ ಅಡ್ಡಿ ಇಲ್ಲ. ಆ ತೀರ್ಪನ್ನು ಮೀರಿದರೆ ವ್ಯಾಜ್ಯ ಆಗುತ್ತದೆ. ಮೇಕೆದಾಟು ವಿಚಾರದಲ್ಲೂ ಇದು ಅನ್ವಯವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

Advertisement

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು ಕರ್ನಾಟಕವು ತೀರ್ಪಿನನ್ವಯ ಯೋಜನೆ ರೂಪಿಸಿದರೆ, ಅದರಿಂದ ಏನೂ ಸಮಸ್ಯೆ ಆಗಲಾರದು. ಈ ಮಾತು ತಮಿಳುನಾಡಿಗೂ ಅನ್ವಯಿಸುತ್ತದೆ . ಮೇಕೆದಾಟು ಯೋಜನೆಯನ್ನು ವಾಸ್ತವಿಕ ನೆಲೆಯಲ್ಲಿ ನೋಡಬೇಕೇ ವಿನಃ ರಾಜಕೀಯವಾಗಿ ಯಾವುದೇ ಪಕ್ಷ ಇದರ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದರು.

ಎರಡು ದೇಶಗಳ ನೀರಿನ ಹಂಚಿಕೆ ಸುಗಮವಾಗಿ ನಡೆಯುತ್ತದೆ. ಎರಡು ರಾಜ್ಯಗಳ ನಡುವಿನ ನೀರಿನ ಹಂಚಿಕೆ, ಅದರಲ್ಲೂ ಕುಡಿಯುವ ನೀರಿನ ಹಂಚಿಕೆಯ ಸಮಸ್ಯೆ ಪರಿಹಾರ ಕಷ್ಟವೇನಲ್ಲ. ಮೇಕೆದಾಟು ವಿಚಾರವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಬಾರದು. ಬೆಂಗಳೂರಿನಲ್ಲಿ ಶೇ.72ರಷ್ಟು ಜನ ಹೊರಗಿನಿಂದ ಬಂದು ನೆಲೆಸಿದವರಿದ್ದಾರೆ. ಮುಂಬೈನಲ್ಲಿರುವ ಶೇ.70ರಷ್ಟು ಜನ ಮಹಾರಾಷ್ಟ್ರದವರಲ್ಲ. ಚೆನ್ನೈನಲ್ಲಿ ಶೇ.50ಕ್ಕೂ ಅಧಿಕ ಜನ ಹೊರ ರಾಜ್ಯದವರಿದ್ದಾರೆ. ಹೀಗಿರುವಾಗ ಕುಡಿಯುವ ನೀರಿನ ವಿಚಾರವನ್ನು ಎರಡು ರಾಜ್ಯಗಳ ನಡುವಿನ ಸಂಘರ್ಷ ಎಂಬಂತೆ ಭಾವನಾತ್ಮಕವಾಗಿ ನೋಡಬಾರದು. ಅದನ್ನು ವಾಸ್ತವಿಕ ನೆಲೆಯಲ್ಲಿ ನೋಡಿ, ಪರಿಹರಿಸುವ ಕಾರ್ಯ ಆಗಬೇಕು ಎಂದರು.

ಇದನ್ನೂ ಓದಿ:ಸಚಿವರ ಮುಂದೆ ವಿಷದ ಬಾಟಲ್ ಇಟ್ಟು ಆತ್ಮಹತ್ಯೆ ಬೆದರಿಕೆ ಹಾಕಿದ ರೈತ

ಕುಡಿಯುವ ನೀರು ಎಲ್ಲರಿಗೂ ಅವಶ್ಯಕ. ಈ ವಿಷಯದಲ್ಲಿ ರಾಜಕಾರಣ ಸಲ್ಲದು. ಬೆಂಗಳೂರಿನಲ್ಲಿ ಶೇ.15ರಿಂದ ಶೇ.16ರಷ್ಟು ತಮಿಳುನಾಡಿನಿಂದ ಬಂದವರು ಇದ್ದಾರೆ. ಅವರಿಗೆ ಕುಡಿಯುವ ನೀರು ಕೊಡುವುದಿಲ್ಲ ಎನ್ನಲಾದೀತೇ? ಕುಡಿಯುವ ನೀರಿನ ವಿಚಾರದಲ್ಲಿ ಬೆಂಕಿ ಹಚ್ಚುವ ರಾಜಕಾರಣಕ್ಕೆ ಅವಕಾಶವಿಲ್ಲ. ಇದು ಸೌಹಾರ್ದಯುತವಾಗಿ ಬಗೆಹರಿಯಬೇಕಾದ ವಿಚಾರವಾಗಿದೆ ಎಂದು ಹೇಳಿದರು.
ಮೇಕೆದಾಟು ವಿಚಾರವಾಗಿ ನೀವು ಕರ್ನಾಟಕದ ಪರವೋ ಅಥವಾ ತಮಿಳುನಾಡು ಪರವೋ ಎಂದು ಪತ್ರಕರ್ತರು ಕೇಳಿದಾಗ, “ನಾನು ಭಾರತದ ಪರ’ ಎಂದು ತಮಿಳುನಾಡು ಬಿಜೆಪಿ ಉಸ್ತುವಾರಿಯೂ ಆಗಿರುವ ಸಿ.ಟಿ. ರವಿ ಜಾಣ್ಮೆಯ ಉತ್ತರ ನೀಡಿದರು.

Advertisement

ರಾಜಕೀಯ ವಿರೋಧಿಗಳು ಬಿಜೆಪಿ ದಲಿತ ವಿರೋಧಿ, ಡಾ.ಅಂಬೇಡ್ಕರರ ವಿರೋಧಿ, ಮೀಸಲಾತಿ ವಿರೋಧಿ ಎಂದು ಆಗಿಂದಾಗೇ ಹೇಳುತ್ತಿರುತ್ತಾರೆ. ಈ ರೀತಿ ಸವಕಲು ಗ್ರಾಮಾಫೋನ್‌ ತಿರುಗಿಸುವವರಲ್ಲಿ ಸಿದ್ದರಾಮಯ್ಯ ಅವರೂ ಸೇರಿದ್ದಾರೆ. ಪೂರ್ವಗ್ರಹಪೀಡಿತರಾಗಿ ಅಥವಾ ಸಾಫ್ಟವೇರ್‌ ಅಪ್‌ಡೇಟ್‌ ಆಗದೆ ಹಳೇ ಗ್ರಾಮಾಫೋನ್‌ ಪ್ಲೇಟ್‌ ಹಾಕುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವು ಡಾ.ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದರೆ, ಡಾ. ಅಂಬೇಡ್ಕರರ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಬಿಜೆಪಿಯು ಹಿಂದುಳಿದ ವರ್ಗದವರನ್ನು ಪ್ರಧಾನಿ ಮಾಡಿದರೆ, ಅಲ್ಪಸಂಖ್ಯಾತರಾದ ಡಾ.ಎಪಿ.ಜೆ. ಅಬ್ದುಲ್‌ ಕಲಾಂ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಲಾಗಿತ್ತು. ದಲಿತ ಸಮುದಾಯದ ರಾಮನಾಥ ಕೋವಿಂದ್‌ ಅವರು ರಾಷ್ಟ್ರಪತಿಯಾಗಿರುವುದು ನಮ್ಮ ಬದ್ಧತೆಯಾಗಿದೆ ಎಂದರು.

ಕಾಂಗ್ರೆಸ್‌ ಬದ್ಧತೆ ಇಲ್ಲ:
ಜಾತಿ ಗಣತಿಗೆ ಕಾಂಗ್ರೆಸ್‌ ಸರ್ಕಾರ 300 ಕೋಟಿ ರೂ. ಖರ್ಚು ಮಾಡಿತ್ತು. ಅವರಿಗೆ ನಿಜವಾಗಿಯೂ ಬದ್ಧತೆ ಇದ್ದರೆ 2015ರಲ್ಲೇ ಸಿಕ್ಕಿದ ಜಾತಿ ಗಣತಿ ವರದಿ ಬಿಡುಗಡೆ ಮಾಡಿಲ್ಲವೇಕೆ ಎಂದು ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೂ ಶೇ.10 ಮೀಸಲಾತಿ ನೀಡುವ ಮೂಲಕ ಎಲ್ಲರಿಗೂ ನ್ಯಾಯ ಎಂಬ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದಿದೆ. ಕಾಂಗ್ರೆಸ್‌ ಪಕ್ಷವು ತನ್ನ ನಡವಳಿಕೆ ಮೂಲಕ ಲೋಕಸಭೆ, ರಾಜ್ಯಸಭೆಗೆ ಅಪಮಾನ ಮಾಡಿದೆ ಎಂದು ವಾಗ್ಧಾಳಿ ನಡೆಸಿದರು.ಶಾಸಕ ಹಾಗೂ ರಾಜ್ಯ ವಕ್ತಾರ ರಾಜು ಗೌಡ ಇದ್ದರು.

ಹಿರಿಯರ ಆಶೀರ್ವಾದ ಪಡೆಯುವ ಗುಣವನ್ನು ಪ್ರತಿಯೊಂದು ರಾಜಕೀಯ ಪಕ್ಷಗಳೂ ಬೆಳೆಸಿಕೊಳ್ಳಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಶೀರ್ವಾದ ಪಡೆದಿದ್ದು ಖಂಡಿತಾ ತಪ್ಪಲ್ಲ. ಪಕ್ಷದ ಒಳಗೆ ರಾಜಕೀಯ ರಾಜಿ ಇರಬೇಕು. ಪಕ್ಷದ ಹೊರಗೆ ಇರಬಾರದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹುಟ್ಟುಹಬ್ಬದ ಶುಭಾಶಯಗಳು.
-ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next