ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳು ತನ್ನ ಸಿಬಂದಿಗೆ ಒಂದು ವರ್ಷ ವೇತನ ರಹಿತ ರಜೆ ನೀಡಲು ಚಿಂತಿಸಿದ್ದು, ಈ ಸಂಬಂಧ ಕೆಎಸ್‌ಆರ್‌ಟಿಸಿಯು ಉಳಿದ ಮೂರು ಸಾರಿಗೆ ನಿಗಮಗಳಿಂದ ಅಭಿಪ್ರಾಯ ಕೇಳಿದೆ.
ಕೋವಿಡ್ ಹರಡುತ್ತಿರುವುದರಿಂದ ಬಸ್ಸುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿಲ್ಲ. ನೌಕರರ ಆರೋಗ್ಯ ಮತ್ತು ನಿಗಮಗಳ ಆರ್ಥಿಕ ದೃಷ್ಟಿಯಿಂದ ಷರತ್ತುಗಳೊಂದಿಗೆ ಒಂದು ವರ್ಷದ ವಿಶೇಷ ರಜೆ ಮಂಜೂರು ಮಾಡಲು ಈ ಚಿಂತಿಸಲಾಗಿದೆ.
“ಇದು ಹೊಸ ಪದ್ಧತಿಯಲ್ಲ. ಉನ್ನತ ಶಿಕ್ಷಣ, ಆರೋಗ್ಯ ಸಮಸ್ಯೆಯಿಂದ ಅರ್ಜಿ ಸಲ್ಲಿಸಿದವರಿಗೆ 5 ವರ್ಷಗಳ ತನಕ ವಿಶೇಷ ರಜೆ ಮಂಜೂರು ಮಾಡಲು ಅವಕಾಶವಿತ್ತು. ಬಯಸಿದವರಿಗಷ್ಟೇ ರಜೆ ಮಂಜೂರು ಮಾಡಲಾಗುವುದು. ಇದರಲ್ಲಿ ಒತ್ತಡ ಹೇರುವುದಿಲ್ಲ. ಈ ಬಗ್ಗೆ ಅಭಿಪ್ರಾಯ ಕೇಳಿ ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಂದ ಅಭಿಪ್ರಾಯ ಕೇಳಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.
ನೌಕರರ ವಿರೋಧ
ಈ ಚಿಂತನೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟ (ಸಿಐಟಿಯು)ದಿಂದ ವಿರೋಧ ವ್ಯಕ್ತವಾಗಿದೆ. ವರ್ಷಗಟ್ಟಲೆ ವೇತನವಿಲ್ಲದ ಪರಿಸ್ಥಿತಿ ನಿರ್ಮಿಸಿದರೆ, ನೌಕರರ ಕುಟುಂಬಗಳನ್ನು ಬೀದಿಗೆ ತಳ್ಳಿದಂತಾಗಲಿದೆ’ ಎಂದು ಒಕ್ಕೂಟದ ಅಧ್ಯಕ್ಷ ಎಚ್. ಡಿ. ರೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.