Advertisement

ಇಂದು ಬಿಜೆಪಿ-2 ಸರಕಾರದ ಚೊಚ್ಚಲ ಬಜೆಟ್‌ : ಬಿಎಸ್‌ವೈ ಕೃಪೆ ಯಾರಿಗೆ?

10:05 AM Mar 06, 2020 | sudhir |

ಬೆಂಗಳೂರು: ಸಮ್ಮಿಶ್ರ ಸರಕಾರ ಪತನದ ಬಳಿಕ ಮತ್ತೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರದ ನಾಯಕತ್ವ ವಹಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಈ ಅವಧಿಯ ಚೊಚ್ಚಲ ಮತ್ತು ತಮ್ಮ ಏಳನೇ ಬಜೆಟ್‌ ಮಂಡಿಸಲಿದ್ದಾರೆ. ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿ ಹಳೆಯ ಯೋಜನೆಗಳ ಸ್ವರೂಪ, ಹೆಸರು ಬದಲಾವಣೆ ಜತೆಗೆ ಕೆಲವು ಜನಪ್ರಿಯ ಯೋಜನೆಗಳು ಘೋಷಣೆಯಾಗುವ ನಿರೀಕ್ಷೆ ಇದೆ.

Advertisement

ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಕಟಿಸಿ ಜನರ ಮನಸ್ಸಿನಲ್ಲಿ ಛಾಪು ಒತ್ತುವಂತೆ ಕೆಲಸ ಮಾಡಬೇಕು ಎಂಬುದು ಯಡಿಯೂರಪ್ಪ ಅವರ ಕನಸು. ಆದರೆ ಆರ್ಥಿಕ ಇತಿಮಿತಿಗಳು, ದುಬಾರಿ ಆಡಳಿತ ನಿರ್ವಹಣ ವೆಚ್ಚ, ನೆರೆ ಪರಿಹಾರ ಕಾರ್ಯ ಸಹಿತ ಇತರ ಕಾರಣಗಳಿಂದ ಲೆಕ್ಕಾಚಾರದ ಬಜೆಟ್‌ ಮಂಡಿಸುವುದು ಅನಿವಾರ್ಯವಾಗಿದೆ. ಸಾಲ ಹಾಗೂ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಆದಾಯ ವೃದ್ಧಿಸಿಕೊಳ್ಳಬಹುದಾಗಿದ್ದು, ಯಡಿಯೂರಪ್ಪ ಅವರು ಇದರಲ್ಲಿ ಯಾವುದಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಕ್ಷಿಪ್ರ ರಾಜಕೀಯ ಬೆಳವಣಿಗೆ ತರುವಾಯ ಬಿಜೆಪಿ ಸರಕಾರ ರಚನೆಯಾದಾಗ ಹೊಸ ಬಜೆಟ್‌ ಮಂಡಿಸುವ ಚಿಂತನೆಯಲ್ಲಿದ್ದ ಯಡಿಯೂರಪ್ಪ ಅವರು ನೆರೆ ಕಾರಣಕ್ಕೆ ಆ ಚಿಂತನೆ ಕೈಬಿಟ್ಟರು. ವೆಚ್ಚ ಹೊಂದಾಣಿಕೆ ಮಾಡಿಕೊಂಡು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿ ಸಿದ ಆಯವ್ಯಯವನ್ನೇ ಜಾರಿಗೊಳಿಸಿದರು. ಈ ಬಾರಿ ಪೂರ್ಣಾವಧಿ ಬಜೆಟ್‌ ಮಂಡಿಸಲು ಸಿದ್ಧರಾಗಿದ್ದಾರೆ.

ಸಾಲದ ಮೊರೆ
ಕೇಂದ್ರದ ತೆರಿಗೆ ಮೂಲದಿಂದ ರಾಜ್ಯಕ್ಕೆ ಬರಬೇಕಾದ ಪಾಲಿನಲ್ಲಿ ಇಳಿಕೆ, ಅನುದಾನ ಹಂಚಿಕೆಯಲ್ಲಿ ಕಡಿತದಿಂದಾಗಿ ಹಣಕಾಸು ಲೆಕ್ಕಾಚಾರ ಏರುಪೇರಾಗಿದೆ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ರೂ.ಗಳ ವಿಶೇಷ ಅನುದಾನ ನೀಡಬೇಕೆಂದು ಕೋರಿ ಯಡಿಯೂರಪ್ಪ ಅವರು ಕೇಂದ್ರ ಸರಕಾರಕ್ಕೆ ಬರೆದ ಪತ್ರಕ್ಕೂ ಈವರೆಗೆ ಪ್ರತಿಕ್ರಿಯೆ ಬಂದಂತಿಲ್ಲ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಸಾಲಕ್ಕೆ ಮೊರೆ ಹೋಗುವುದು ಅನಿವಾರ್ಯವಾಗಬಹುದು. ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಪ್ರಮಾಣದ ಶೇ.3ರಷ್ಟು ಸಾಲ ಪಡೆಯಲು ಅವಕಾಶವಿದ್ದು, ವಿಶೇಷ ಅವಕಾಶ ಬಳಸಿಕೊಂಡು ಶೇ.3.5ರಷ್ಟು ಸಾಲ ಪಡೆಯಲು ಮುಂದಾಗುವರೇ ಎಂಬುದು ಗುರುವಾರ ಮಂಡನೆಯಾಗುವ ಬಜೆಟ್‌ನಲ್ಲಿ ಸ್ಪಷ್ಟವಾಗಲಿದೆ.

ತೈಲ ಉಪಕರ ಏರಿಕೆ?
ದೇಶಾದ್ಯಂತ ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಬಳಿಕ ವಾಣಿಜ್ಯ ತೆರಿಗೆ ಪ್ರಮಾಣ ಹೆಚ್ಚಿಸಲು ಅವಕಾಶವಿಲ್ಲ. ಹಾಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸುವ ಉಪಕರ ಪ್ರಮಾಣ ಹೆಚ್ಚಿಸುವುದು ಇಲ್ಲವೇ ಅಬಕಾರಿ ಸುಂಕವನ್ನಷ್ಟೇ ಏರಿಕೆ ಮಾಡಬಹುದಾಗಿದೆ. ಉಳಿದಂತೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ, ವಾಹನ ಮಾರಾಟ ತೆರಿಗೆ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

Advertisement

ಬಿಎಸ್‌ವೈ ಏಳನೇ ಬಜೆಟ್‌
ಬಿ.ಎಸ್‌. ಯಡಿಯೂರಪ್ಪ ಅವರು ಮಂಡಿಸುವ ಏಳನೇ ಬಜೆಟ್‌ ಇದಾಗಿದೆ. ಬಿಜೆಪಿ- ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಯಾಗಿ ಎರಡು ಬಜೆಟ್‌ಗಳನ್ನು ಮಂಡಿಸಿದ್ದ ಯಡಿಯೂರಪ್ಪ ಅವರು ಅನಂತರ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ನಾಲ್ಕು ಬಜೆಟ್‌ಗಳನ್ನು ಮಂಡಿಸಿದ್ದರು. ಒಟ್ಟಾರೆ ಏಳನೇ ಬಜೆಟ್‌, ಮುಖ್ಯಮಂತ್ರಿಯಾಗಿ ಐದನೇ ಬಜೆಟ್‌ ಇದಾಗಿದೆ.

ಗಾತ್ರ ಕೊಂಚ ಏರಿಕೆ!
ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು 2019-20ನೇ ಸಾಲಿಗೆ ಮಂಡಿಸಿದ ಬಜೆಟ್‌ ಗಾತ್ರ 2.34 ಲಕ್ಷ ಕೋಟಿ ರೂ.ಗಳಷ್ಟಿತ್ತು. ರಾಜ್ಯದ ಸದ್ಯದ ಆರ್ಥಿಕತೆಯನ್ನು ಗಮನಿಸಿದರೆ ಬಜೆಟ್‌ ಗಾತ್ರ ಅಷ್ಟೇ ಅಥವಾ ಅದಕ್ಕಿಂತ ಇಳಿಕೆಯಾಗುವ ಸಂಭವ ಇತ್ತು. ಆದರೆ ಆರೂವರೆ ವರ್ಷಗಳ ಬಳಿಕ ರಚನೆಯಾಗಿರುವ ಬಿಜೆಪಿ ಸರಕಾರದ ಬಜೆಟ್‌ ಗಾತ್ರ ಇಳಿಕೆಯಾದರೆ ಅಪಖ್ಯಾತಿಗೆ ಗುರಿಯಾಗಬೇಕಾದೀತು ಎಂಬ ಆತಂಕದಿಂದ ಗಾತ್ರವನ್ನು ಕೊಂಚ ಹಿಗ್ಗಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಹಾಗಾಗಿ ಈ ಬಾರಿ ಶೇ.10ರಷ್ಟು ಹೆಚ್ಚಬಹುದು ಎಂಬ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next