Advertisement

ಸರ್ವೋದಯದ ಬೀಜ ಬಿತ್ತನೆ; ಚೊಚ್ಚಲ ಬಜೆಟ್‌ ಕುರಿತಂತೆ ಸಿಎಂ ಬೊಮ್ಮಾಯಿ ಅವರಿಂದಲೇ ಲೇಖನ

01:42 AM Mar 05, 2022 | Team Udayavani |

ಎಲ್ಲ ಪ್ರದೇಶ ಹಾಗೂ ವರ್ಗದವರನ್ನು ತಲುಪಲು ಬಜೆಟ್‌ನಲ್ಲಿ ಸರಕಾರ ಶ್ರಮಿಸಿದ್ದು, ತೆರಿಗೆ ಹೊರೆ ಇಲ್ಲದೆ ಇರುವ ಸಂಪನ್ಮೂಲದಲ್ಲಿ ಸಾಕಷ್ಟು ಯೋಜನೆಗಳನ್ನು ಪ್ರಕಟಿಸಿದೆ. ಇದು ನಾವು ಪಾಲಿಸಿಕೊಂಡು ಬಂದಿರುವ ಆರ್ಥಿಕ ಶಿಸ್ತಿನಿಂದ ಸಾಧ್ಯವಾಗಿದೆ ಎಂದಿದ್ದಾರೆ ಮುಖ್ಯಮಂತ್ರಿ.

Advertisement

ಹಿಂದಿನ ಎರಡು ವರ್ಷಗಳ ಪರಿಸ್ಥಿತಿಯನ್ನು ಗಮನಿಸಿದರೆ, ಯಾವುದೇ ತೆರಿಗೆ ವಿಧಿಸದೆ ಬಜೆಟ್‌ ನಿರ್ವಹಣೆ ಸಾಕಷ್ಟು ಸವಾಲಾಗಿತ್ತು. ಎಲ್ಲ ವಲಯಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಿದ್ದೇನೆ.

ಇದೊಂದು ಸೂಕ್ಷ್ಮಮತಿಯ ಬಜೆಟ್‌. ರಾಜ್ಯದಲ್ಲಿ ಅರಣ್ಯ ಮತ್ತು ಪರಿಸರದ ನಾಶದಿಂದ ಆಗುವ ಪರಿಣಾಮವನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್‌ ಸಿದ್ಧಗೊಳಿಸಲಾಗಿದೆ. ಅತ್ಯಂತ ಸಂಕಷ್ಟದಲ್ಲಿರುವ ವರ್ಗಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಎಷ್ಟೋ ಜನರು ಕ್ಯಾನ್ಸರ್‌ನಿಂದ ಹಾಗೂ ಕಿಡ್ನಿ ರೋಗದಿಂದ ಬಳಲುತ್ತಿದ್ದಾರೆ. ಅವರಿಗೆ ಕಿಮೊ ಥೆರಪಿ ಹಾಗೂ ಡಯಾಲಿಸಿಸ್‌ ಮಾಡಿಸಿಕೊಳ್ಳುವುದು ಎಷ್ಟು ಕಷ್ಟ ಅಂತ ರೋಗಿಗಳ ಮನೆಯವರಿಗೆ ಗೊತ್ತಿದೆ. 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಕಣ್ಣು ಕಾಣುವುದಿಲ್ಲ. ಮಂಜು ಮಂಜಾಗಿ ಕಂಡರೂ ಕನ್ನಡಕ ತೆಗೆದುಕೊಳ್ಳಲಿಕ್ಕೆ ಆಗೋದಿಲ್ಲ. ಅಂಥವರಿಗೆ ಸರಕಾರದಿಂದಲೇ ಕಣ್ಣಿನ ತಪಾಸಣೆ, ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ, ಕನ್ನಡಕ ನೀಡುವ ಯೋಜನೆ ಹಾಕಿಕೊಂಡಿದ್ದೇವೆ.

ಕೆಲವರು ಹುಟ್ಟುವಾಗಲೇ ಕಿವುಡರಾಗಿರು ತ್ತಾರೆ. ಅಂಥವರಿಗೆ ಶ್ರವಣ ಶಕ್ತಿಯ ಯಂತ್ರ ಖರೀದಿಸುವ ಆರ್ಥಿಕ ಶಕ್ತಿ ಇರೋದಿಲ್ಲ. ಅದಕ್ಕೆ ಸುಮಾರು 5 ಲಕ್ಷ ರೂ. ವೆಚ್ಚ ಆಗುತ್ತದೆ. ಅಂತಹ 500 ಬಡ ಕಿವುಡ ಮಕ್ಕಳಿಗೆ ಪ್ರಾಯೋಗಿಕವಾಗಿ ಕಾಂಕ್ಲಿಯರ್‌ ಮೆಷಿನ್‌ ಕೊಡಲು ನಿರ್ಧರಿಸಿದ್ದೇವೆ. ಪೌರ ಕಾರ್ಮಿಕರ ಸೇವೆಯನ್ನು ಗೌರವಿಸುವ ಉದ್ದೇಶದಲ್ಲಿ ಅವರ ಗೌರವ ಧನ ಹೆಚ್ಚಿಸಿದ್ದೇವೆ. ನಮಗೆ ಸರಕಾರ ಕೊಡುವ ಸಹಾಯಧನ ಸಾಲುತ್ತಿಲ್ಲ ಎಂದು ಹಳೆಯ ಪೈಲ್ವಾನರು ಹೇಳಿಕೊಂಡಿದ್ದರು. ಅವರ ಗೌರವಧನವನ್ನು ಹೆಚ್ಚಿಸಿದ್ದೇವೆ.

ಹಳದಿ ಬೋರ್ಡಿನ ಟ್ಯಾಕ್ಸಿ, ಆಟೋ ಚಾಲಕರದ್ದೂ ಒಂದು ಬೇಡಿಕೆ ಇತ್ತು. ನಮಗೂ ಒಂದು ವಿಶೇಷ ಯೋಜನೆ ಘೋಷಿಸಬೇಕು ಅಂತ ಕೇಳಿಕೊಂಡಿದ್ದರು. ಅವರೂ ಸಾಕಷ್ಟು ಸಮಸ್ಯೆಯಲ್ಲಿರುವ ವರ್ಗ. ಅವರಿಗಾಗಿ ಯೋಜನೆಯನ್ನು ಘೋಷಿಸಿದ್ದೇವೆ.

Advertisement

ಗ್ರಾಮೀಣ ಪ್ರದೇಶದಲ್ಲಿ ಕಷ್ಟಪಡುವ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜೀವನ ಮಟ್ಟವನ್ನು ಸುಧಾರಿಸಲು ಗೌರವಧನವನ್ನು ಹೆಚ್ಚಿಸಿದ್ದೇವೆ. ಈ ಬಜೆಟ್‌ನ ತಿರುಳನ್ನು ಗಮನಿಸಿ. ಇದು ಅತ್ಯಂತ ಮಾನವೀಯತೆಯಿಂದಲೂ ಕೂಡಿದೆ. ಕೋವಿಡ್‌ನಿಂದಾಗಿ ಎರಡು ವರ್ಷ ಆದಾಯದಲ್ಲಿ ಕೊರತೆಯಾಗಿದ್ದರೂ, ನಾವು ಪಾಲಿಸಿಕೊಂಡು ಬಂದಿರುವ ಆರ್ಥಿಕ ಶಿಸ್ತಿನಿಂದಾಗಿ ಯಾವುದೇ ತೆರಿಗೆ ಹೊರೆ ಇಲ್ಲದೆ ಉತ್ತಮ ಬಜೆಟ್‌ ಮಂಡಿಸಲು ಸಾಧ್ಯವಾಗಿದೆ.

ನಾವು ಬಜೆಟ್‌ನಲ್ಲಿ ಕೃಷಿ, ಸೇವಾವಲಯ ಮತ್ತು ಕೈಗಾರಿಕಾ ವರ್ಗಗಳಿಗೂ ಆದ್ಯತೆ ನೀಡಿದ್ದೇವೆ. ಪ್ರಮುಖವಾಗಿ ನಮ್ಮ ರೈತರ ಬಹಳ ದಿನಗಳಿಂದ ಯಶಸ್ವಿನಿ ಯೋಜನೆ ಜಾರಿಗೊಳಿಸಬೇಕೆಂದು ಕೇಳುತ್ತಿದ್ದರು. ಅವರ ಮನವಿಯನ್ನು ಪರಿಗಣಿಸಿದ್ದೇವೆ.

ಈ ವರ್ಷ ಮೋಟಾರು ವಾಹನ ತೆರಿಗೆ ಹೊರತುಪಡಿಸಿದರೆ ಉಳಿದ ಆದಾಯ ಹೆಚ್ಚಾ ಗುತ್ತದೆ. ಸೋರಿಕೆ, ಅಕ್ರಮ ಮದ್ಯ ಸರಬರಾಜು ತಡೆದರೆ ಅಬಕಾರಿ ತೆರಿಗೆ ಹೆಚ್ಚಾಗುತ್ತದೆ. ಜಿಎಸ್‌ಟಿ ಈ ವರ್ಷದಿಂದ ಬರುವುದು ಅನುಮಾನ ಇದೆ. ಆದರೂ ಜೂನ್‌ ವರೆಗೂ ಸಮಯ ಇದೆ; ನೋಡೋಣ. ಇನ್ನೂ ಮೂರು ವರ್ಷ ಮುಂದುವರಿಸಿ ಎಂದು ಕೇಂದ್ರ ಸರಕಾರವನ್ನು ಕೇಳಿಕೊಂಡಿದ್ದೇವೆ. ಏನು ಮಾಡುತ್ತಾರೆ ನೋಡಬೇಕು.

ನನಗೆ ಎಲ್ಲ ನೀರಾವರಿ ಯೋಜನೆಯ ಪರಿಸ್ಥಿತಿ ಗೊತ್ತಿದೆ. ಮೇಕೆದಾಟು ಯೋಜನೆಗೆ ಯಾವಾಗ ಅನುಮತಿ ಸಿಗುತ್ತದೆ ಎಂಬುದೂ ಗೊತ್ತು. ಅದೇ ಕಾರಣಕ್ಕೆ ಈಗ 1,000 ಕೋ. ರೂ. ಮೀಸಲಿಟ್ಟಿದ್ದೇವೆ. ಕೃಷ್ಣಾ, ಮಹಾದಾಯಿ, ಭದ್ರಾ ಮೇಲ್ದಂಡೆ, ತುಂಗಭದ್ರಾ ಎಲ್ಲ ಯೋಜನೆಗಳಿಗೂ ಹಣ ಮೀಸಲಿಟ್ಟಿದ್ದೇವೆ.

ಒಟ್ಟಾರೆ ನಮ್ಮದು ಎಲ್ಲ ವರ್ಗ ಮತ್ತು ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಕೋನದಲ್ಲಿಟ್ಟು ಮಂಡಿಸಿರುವ ಬಜೆಟ್‌.

2 ಗಂಟೆ 10 ನಿಮಿಷ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 119 ಪುಟಗಳ ಬಜೆಟ್‌ ಮಂಡಿಸಲು 2.10 ಗಂಟೆ ತೆಗೆದುಕೊಂಡರು. 12.32 ನಿಮಿಷಕ್ಕೆ ಬಜೆಟ್‌ ಭಾಷಣ ಆರಂಭಿಸಿದ ಅವರು 2.42 ನಿಮಿಷಕ್ಕೆ ಪೂರ್ಣಗೊಳಿಸಿದರು. ಮುಖ್ಯಮಂತ್ರಿಯವರ ಕುಟುಂಬ ಸದಸ್ಯರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಬಜೆಟ್‌ ಮಂಡನೆಯನ್ನು ವೀಕ್ಷಿಸಿದರು.

- ಬಸವರಾಜ ಬೊಮ್ಮಾಯಿ,
ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next