ಬೆಂಗಳೂರು: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಜೂ.21 ರಿಂದ 28ರ ವರೆಗೆ ರಾಜ್ಯದ 34 ಶೈಕ್ಷಣಿಕ ಜಿಲ್ಲೆಯ 673 ಕೇಂದ್ರಗಳಲ್ಲಿ ನಡೆಯಲಿದೆ. 2.7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
673 ಪರೀಕ್ಷಾ ಕೇಂದ್ರದಲ್ಲಿ 355 ಕ್ಲಸ್ಟರ್ ಸಹಿತ ಹಾಗೂ 249 ಕ್ಲಸ್ಟರ್ ರಹಿತ ಕೇಂದ್ರ ಹೊಂದಿದ್ದು, ಅದರಲ್ಲಿ 645 ಸಾಮಾನ್ಯ, 17 ಸೂಕ್ಷ್ಮ ಹಾಗೂ 11 ಅತಿ ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ.
ಪೂರಕ ಪರೀಕ್ಷೆಗೆ 1,32,543 ಬಾಲಕರು ಹಾಗೂ 73,370 ಬಾಲಕಿಯರು ಸೇರಿ ಒಟ್ಟೂ2,07,913 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಪ್ರತಿ ಕೇಂದ್ರಕ್ಕೆ ತಾಲೂಕು ಮತ್ತು ಜಿಲ್ಲಾಮಟ್ಟದ 306 ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಸ್ಥಾನಿಕ ಜಾಗೃತಿದಳ ಸದಸ್ಯರನ್ನು ನೇಮಕ ಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳನ್ನು ಒಳಗೊಂಡ ವಿಚಕ್ಷಣ ಜಾಗೃತ ದಳದ ರಚನೆಯನ್ನು ಮಾಡಲಾಗಿದೆ.
ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ರಾಜ್ಯದ 9 ಜಿಲ್ಲೆಗಳಲ್ಲಿ ನಡೆಸಲಾಗುವುದು. ಇದಕ್ಕಾಗಿ 54 ವಿಷಯವಾರು ಮೌಲ್ಯಮಾಪನ ಕೇಂದ್ರಗಳನ್ನು ಗುರುತಿಸಲಾಗುತ್ತದೆ. 18 ಸಾವಿರ ಮೌಲ್ಯಮಾಪಕರು ಜುಲೈ 8 ರಿಂದ 14ರ ವರೆಗೆ ಮೌಲ್ಯಮಾಪನ ಮಾಡಲಿದ್ದಾರೆ ಎಂದು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಳಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.