ದುಬೈ: ಕರ್ನಾಟಕ ಸಂಘ ಶಾರ್ಜಾ ವತಿಯಿಂದ ಸಂಘದ 16ನೇ ವಾರ್ಷಿಕೋತ್ಸವ ಸಮಾರಂಭ, ಕರ್ನಾಟಕ ರಾಜ್ಯೋತ್ಸವ ಮತ್ತು ಪ್ರತಿಷ್ಠಿತ ಮಯೂರ ಪ್ರಶಸ್ತಿ ಪ್ರದಾನ ಸಮಾರಂಭವು ನ. 16ರಂದು ಇಂಡಿಯನ್ ಅಸೋಸಿಯೇಶನ್ ಶಾರ್ಜಾದ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆನಂದ ಬೈಲೂರು ವಹಿಸಿದ್ದು, ಖ್ಯಾತ ಚಲನ ಚಿತ್ರನಟ ಅನಂತನಾಗ್ ಅವರು ಮುಖ್ಯ ಅತಿಥಿಯಾಗಿದ್ದರು. ಯುಎಇಯ ಹೆಸರಾಂತ ಉದ್ಯಮಿ ಮೈಕಲ್ ಡಿ’ಸೋಜಾ ಅವರಿಗೆ ಶಾರ್ಜಾ ಕರ್ನಾಟಕ ಸಂಘ ಕೊಡಮಾಡುವ ಪ್ರತಿಷ್ಠಿತ ಮಯೂರ ಪ್ರಶಸ್ತಿಯನ್ನು ಅನಂತನಾಗ್ ಅವರು ವೇದಿಕೆಯಲ್ಲಿದ್ದ ಸಂಘದ ಪದಾಧಿಕಾರಿಗಳು ಹಾಗೂ ಅತಿಥಿಗಳ ಉಪಸ್ಥಿತಿಯಲ್ಲಿ ಪ್ರದಾನಿಸಿ ಗೌರವಿಸಿದರು.
ನಟ ಅನಂತ್‌ನಾಗ್, ಉದ್ಯಮಿ ಹರೀಶ್ ಶೇರಿಗಾರ್, ರೊನಾಲ್ಡ… ಕುಲಾಸೋ, ರಾಮಚಂದ್ರ ಹೆಗಡೆ, ಸಂಘದ ಪೋಷಕ ಮಾರ್ಕ್ ಡೆನ್ನಿಸ್, ಅಧ್ಯಕ್ಷ ಆನಂದ್ ಬೈಲೂರು, ಕಾರ್ಯದರ್ಶಿ ನೋಯೆಲ್ ಅಲ್ಮೇಡಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತ್‌ನಾಗ್ ಹಾಗೂ ಪತ್ನಿ ಗಾಯತ್ರಿ ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಸಮ್ಮಾನಿಸಿ ಅಭಿನಂದಿಸಿದರು. ಅನಂತ್‌ನಾಗ್ ಅವರು ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡಿನಿಂದ ಅಭಿಮಾನಿಗಳ ಮನಸೆಳೆದರು. ಗಾಯಕ ಹರೀಶ್ ಶೇರಿಗಾರ್ ಅವರ ಸಾರಥ್ಯದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯಿತು. ಶಾರ್ಜಾ ಕರ್ನಾಟಕ ಸಂಘ ಪ್ರತಿ ವರ್ಷ ಸಂಘದ ಒಳಿತಿಗಾಗಿ ಶ್ರಮಿಸುವವರಿಗೆ ನೀಡುವ ಪ್ರಶಸ್ತಿಯನ್ನು ಉದ್ಯಮಿ ಸತೀಶ್ ಪೂಜಾರಿ ಮತ್ತು ಸುವರ್ಣ ಸತೀಶ್ ದಂಪತಿಗೆ ಗಣ್ಯರು ಪ್ರದಾನಿಸಿದರು.
ಗಾಯಕ-ಗಾಯಕಿಯರಾದ ಕೃಷ್ಣ ಪ್ರಸಾದ್, ಅನಿತಾ, ಉದಯ್ ನಂಜಪ್ಪ, ಸಾಯಿ ಮಲ್ಲಿಕಾ, ನವೀನ್ ಕೊಪ್ಪ, ಮಧುರ, ರವಿರಾಜ್ ತಂತ್ರಿ, ರಾಮಚಂದ್ರ, ಸುಕನ್ಯಾ ಕನ್ನಡದ ಸುಮಧುರ ಗೀತೆಗಳನ್ನು ಹಾಡಿ ಸಂಗೀತ ಸುಧೆ ಹರಿಸಿದರು. ಮಂಗಳೂರಿನ ಖ್ಯಾತ ಸಂಗೀತ ನಿರ್ದೇಶಕ ರಾಜ್ ಗೋಪಾಲ್ ಮತ್ತು ಅವರ ತಂಡ ಸಂಗೀತ ನೀಡಿದರು. ವಿವಿಧ ನೃತ್ಯ ತಂಡಗಳಿಂದ ನೃತ್ಯ, ಯಕ್ಷಗಾನ, ದೇಶ ಭಕ್ತಿಯ ರೂಪಕಗಳು ಪ್ರದರ್ಶನಗೊಂಡವು. ಮಾಜಿ ಅಧ್ಯಕ್ಷ ಗಣೇಶ ರೈ, ನವೀನ್ ಕೊಪ್ಪ, ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.