Advertisement

ಕರ್ನಾಟಕ ಸಂಘ ಪನ್ವೇಲ್‌: 26ನೇ ವಾರ್ಷಿಕ ಮಹಾಸಭೆ

12:31 PM Nov 28, 2017 | Team Udayavani |

ಪನ್ವೇಲ್‌: ಕರ್ನಾಟಕ ಸಂಘ ಪನ್ವೇಲ್‌ ಇದರ 26ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ  ಸಂಘದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಕೊಲ್ಪೆ ಧನಂಜಯ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಗೀತಾ ಶೆಟ್ಟಿ ಮತ್ತು ಉಮಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಮಹಾಸಭೆಗೆ ಚಾಲನೆ ನೀಡಲಾಯಿತು. ಪ್ರಾರಂಭದಲ್ಲಿ  ವರದಿ ವರ್ಷದಲ್ಲಿ ಅಗಲಿದ ಸಂಘದ ಮಾಜಿ ಅಧ್ಯಕ್ಷ ಅರುಣ್‌ ಕುಮಾರ್‌ ಶೆಟ್ಟಿ ಮತ್ತು ಸಾಹಿತಿ ರವಿ ರಾ. ಅಂಚನ್‌ ಹಾಗೂ ಇದರ ಸದಸ್ಯ ಬಾಂಧವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್‌ ಶೆಟ್ಟಿ ಕುತ್ಯಾರ್‌ ಅವರು 25 ನೇ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ಅಂಗೀಕರಿಸಿಕೊಂಡು, ಗತ ವರ್ಷದ ವರದಿ ಹಾಗೂ ವಾರ್ಷಿಕ ಚಟುವಟಿಕೆಗಳ ಮಾಹಿತಿ ನೀಡಿದರು.

ಗೌರವ ಕೋಶಾಧಿಕಾರಿ ಸುರೇಶ್‌ ರಾವ್‌ ಅವರು 2016-17ನೇ ಸಾಲಿನ ವಾರ್ಷಿಕ ಆಯವ್ಯಯ ಪಟ್ಟಿಯನ್ನು ಮಂಡಿಸಿದರು. ಆಡಳಿತ ಮಂಡಳಿಯ ಕಾರ್ಯಕಾರಿಣಿ ಸಮಿತಿಗೆ ನೂತನವಾಗಿ ಆಯ್ಕೆಯಾದ ಜಗದೀಶ್‌ ಶೆಟ್ಟಿ ಪನ್ವೇಲ್‌ ಅವರನ್ನು ಪರಿಚಯಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಗದೀಶ್‌ ಶೆಟ್ಟಿ ಪನ್ವೇಲ್‌ ಅವರು, ಸಂಘದ ಅಭಿವೃದ್ಧಿಗಾಗಿ ತನ್ನಿಂದಾದ ಯೋಗದಾನವನ್ನು ನೀಡಲಿದ್ದೇನೆ. ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ನಾವೆಲ್ಲರೂ ಸಮರ್ಪಣ ಭಾವದಿಂದ ಸಂಘವನ್ನು ಮುನ್ನಡೆಸೋಣ ಎಂದರು.

ಹಿರಿಯ ಸದಸ್ಯ ಹಾಗೂ ಸಂಸ್ಥಾಪಕ  ಕಾರ್ಯದರ್ಶಿ ಎಚ್‌. ವೈ. ಮಳ್ಳೋಧೆ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸಂತೋಷ್‌ ಜಿ. ಶೆಟ್ಟಿ ಅವರು ಎಚ್‌. ವೈ.ಮಳ್ಳೋಧೆ ಅವರು, ಸಂಘದಕಟ್ಟಡದ ಅಭಿವೃದ್ಧಿಗೋಸ್ಕರ ಮರು ಪಾವತಿ ದೇಣಿಗೆ ರೂಪದಲ್ಲಿ ಬೃಹತ್‌ ಮೊತ್ತದ ಹಣ ವನ್ನು ನೀಡಿ ಸಂಘದ ಏಳ್ಗೆ
ಯಲ್ಲಿ ಪಾತ್ರ ವಹಿಸಿರು ವುದನ್ನು ವಿವರಿಸಿಅವರನ್ನು ಅಭಿನಂದಿಸಿದರು.

Advertisement

ಸಭೆಯಲ್ಲಿ ಭಾಗವಹಿಸಿದ ಹಿರಿಯಸದಸ್ಯರು  ಸಲಹೆ-ಸೂಚನೆಗಳನ್ನು ನೀಡಿ ದರು. ಕನ್ನಡಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ್‌ ಜಿ. ಶೆಟ್ಟಿ ಅವರು ಮಾತನಾಡಿ, ಸಂಘದ ಹಿರಿಯರು ಸುಮಾರು 26 ವರ್ಷಗಳ ಹಿಂದೆ ಕಂಡ ಕನಸು ಇನ್ನು ಸ್ವಲ್ಪ ಸಮಯದಲ್ಲೇ ಖಂಡಿತಾ ನನಸಾಗುವ ಕಾಲ ಬಂದಿದೆ. ಕರ್ನಾಟಕ ಸಂಘದ ಭವ್ಯ ಕಟ್ಟಡವು ಹಿರಿಯ-ಕಿರಿಯ ಸದಸ್ಯ ಬಾಂಧವರ, ದಾನಿಗಳ, ಹಿತೈಷಿಗಳ ಸುಕೃತದ ಫಲದಿಂದ ರಾರಾಜಿಸಲು ಸನ್ನದ್ಧವಾಗಿದೆ ಎಂದು ನುಡಿದರು.

ಕಾರ್ಯದರ್ಶಿ ಸತೀಶ್‌ ಶೆಟ್ಟಿ ಅವರು ಮಾತನಾಡಿ, ನಮ್ಮ ಕರ್ನಾಟಕ ಸಂಘವು ಯಾವುದೇ ರೀತಿಯ ಜಾತಿ, ಮತ, ಭೇದ-ಭಾವವನ್ನು ಮಾಡದೆ ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು ಎಂಬಂತೆ ಪನ್ವೇಲ್‌ ಪರಿಸರದಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಕಾರ್ಯಪ್ರವೃತ್ತವಾಗಿದೆ. ಸಂಘದಲ್ಲಿ ಯಾವುದೇ ಚಟುವಟಿಕೆಗಳು ನಡೆದರೂ ದಾನಿಗಳ ಸಹಾಯಹಸ್ತ ನಮ್ಮ ಪಾಲಿಗಿದೆ. ಸಂಘದ ಅಭಿವೃದ್ಧಿಯಲ್ಲಿ ಮಹಿಳಾ ವಿಭಾಗದ ಪಾತ್ರ ಮಹತ್ತರವಾಗಿದೆ ಎಂದರು.

ಅಧ್ಯಕ್ಷ ಕೊಲ್ಪೆ ಧನಂಜಯ ಶೆಟ್ಟಿ ಅವರು ಮಾತನಾಡಿ, ಸಂಘದ ಬೆಳವಣಿಗೆ ಹಾಗೂ ಏಳ್ಗೆಗಾಗಿ ಎಲ್ಲಾ ಸದಸ್ಯರ ಯೋಗದಾನವು ಅತೀ ಮುಖ್ಯವಾಗಿದೆ. ಎಲ್ಲರೂ ಒಮ್ಮತದ ಭಾವನೆಯಿಂದ ಸಂಘವನ್ನು ಅಭಿವೃದ್ಧಿಯ ಪಥದತ್ತ ಸಾಗಿಸಲು ನೆರವಾಗಬೇಕು. ಪನ್ವೇಲ್‌ ಕರ್ನಾಟಕ ಸಂಘವು ಇತರ ಸಂಘ-ಸಂಸ್ಥೆಗಳಿಗೆ ಮಾದರಿ ಸಂಸ್ಥೆಯಾಗಿ ಬೆಳಗುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಸಂಘದ ಮೂರನೇ ಮಹಡಿಯ ನೂತನ ಸಭಾಗೃಹದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ವಾಸ್ತು ಪೂಜೆಯನ್ನು ಸದಸ್ಯ ಬಾಂಧವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು. ಕೊನೆಯಲ್ಲಿ ಪ್ರಸಾದ ರೂಪದಲ್ಲಿ ಅನ್ನದಾನ ನಡೆಯಿತು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರು, ಸ್ಥಳೀಯ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next