ಡೊಂಬಿವಲಿ: ಕರ್ನಾಟಕ ಸಂಘ ದಹಿಸರ್ ಇದರ ದಶಮಾನೋತ್ಸವ ಸಂಭ್ರಮವು ಮಾ. 26 ರಂದು ಬೊರಿವಲಿ ಪಶ್ಚಿಮದ ದೇವಿದಾಸ್ ಲೇನ್‌ನ ಜ್ಞಾನಸಾಗರ ಆ್ಯಂಪಿ ಥಿಯೇಟರ್‌ನಲ್ಲಿ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ದಹಿಸರ್ ಕರ್ನಾಟಕ ಸಂಘದ ಅಧ್ಯಕ್ಷ ನಿಟ್ಟೆ ಎಂ. ಜಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಬಂಟ್ಸ್ ನ್ಯಾಯ ಮಂಡಳಿಯ ಉಪಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ದಹಿಸರ್ ಹೊಟೇಲ್ ಉದ್ಯಮಿ ಕೃಷ್ಣ ಆಚಾರ್ಯ ದಂಪತಿಗಳನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ. ಸಮ್ಮಾನಪತ್ರವನ್ನಿತ್ತು ಸಮ್ಮಾನಿಸಿ ಶುಭಹಾರೈಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮನಾಭ ಎಸ್. ಪಯ್ಯಡೆ ಅವರು, ಜಾತೀಯ ಅಥವಾ ಅನ್ಯ ಸಂಘಟನೆಗಳಾಗಲಿ ಸಮಾಜ ಸೇವೆಯ ಮೂಲಕ ಕ್ಲಪ್ತ ಸಮಯದಲ್ಲಿ ಸಹಾಯ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಸೇವೆ ಮಾಡುವ ಸಮಾಜ ಸೇವಕರಿಗೂ ಆತ್ಮತೃಪ್ತಿ ದೊರೆಯುತ್ತದೆ. ಸಮಾಜ ಸೇವೆಯ ಮೂಲಕ ಮನುಷ್ಯನ ಹಣ ನಿಂತ ನೀರಾಗದೆ ಹರಿಯುವ ನೀರಾಗಬೇಕು. ಇಂತಹ ಕೆಲಸಕ್ಕೆ ದೇವರ ಸಹಾಯ ಸದಾ ಇರುತ್ತದೆ. ನಾವು ಭಾಷಾಭಿಮಾನವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಭಾಷೆಯ ಆತ್ಮಾಭಿಮಾನದ ಮೂಲಕ ಮನೆತನದ ಗೌರವ, ಮಕ್ಕಳಲ್ಲಿ ಸಂಸ್ಕೃತಿಯನ್ನು ಉಳಿಸುವ ಅಭಿಯಾನಕ್ಕೆ ಪ್ರೋತ್ಸಾಹಿಸಬೇಕು. ಸಂಘದ ಬೆಳವಣಿಗೆಗೆ ಸಂಘಟಿತ ಮನೋಭಾವ ಕಾರಣವಾಗಬೇಕು. ಸಮ್ಮಾನಕ್ಕೆ ನಾನು ಎಂದಿಗೂ ಆಪೇಕ್ಷಿಸಿದವನಲ್ಲ. ನಿಮ್ಮೆಲ್ಲರ ಪ್ರೀತಿಗೆ ಋಣಿಯಾಗಿದ್ದೇನೆ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.
ಮತ್ತೋರ್ವ ಸಮ್ಮಾನಿತ ಕೃಷ್ಣ ಆಚಾರ್ಯ ಅವರು ಮಾತನಾಡಿ, ಸಂಘದ ಸಿದ್ಧಿ-ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಮಂಜುಳಾ ಆನಂದ ಶೆಟ್ಟಿ, ಪೂರ್ಣಿಮಾ ಪೂಜಾರಿ ಅವರು ಸಮ್ಮಾನ ಪತ್ರ ವಾಚಿಸಿದರು.
ಸಮಾರಂಭದ ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಆರ್. ಭಂಡಾರಿ, ಬಂಟರ ಸಂಘ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಮುಂಡಪ್ಪ ಎಸ್. ಪಯ್ಯಡೆ, ಮಹಾರಾಷ್ಟÅ ಒಕ್ಕಲಿಗರ ಸಂಘದ ಅಧ್ಯಕ್ಷ ರಂಗಪ್ಪ ಸಿ. ಗೌಡ, ಮಹಾರಾಷ್ಟ್ರ ಮಾನವ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್ ಬಿ. ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ಧನ ಭಟ್, ಸಂಘದ ಗೌರವಾಧ್ಯಕ್ಷ ಟಿ. ಕೆ. ಕೋಟ್ಯಾನ್, ಉಪಾಧ್ಯಕ್ಷ ಸುನಿಲ್ ಆರ್. ಶೆಟ್ಟಿ, ಗೌರವ ಕಾರ್ಯದರ್ಶಿ ಮೋಹಿನಿ ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಂದಾ ಎಸ್. ಶೆಟ್ಟಿ, ಗೌರವ ಕೋಶಾಧಿಕಾರಿ ಕುಕ್ಕೆಹಳ್ಳಿ ವಿಠಲ ಪ್ರಭು, ರಘುನಾಥ ಎನ್. ಶೆಟ್ಟಿ ಅವರು ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ್ ಉದ್ಯಾವರ