Advertisement
ಯಾವುದೇ ಸ್ಥಾನಮಾನ ನಿರೀಕ್ಷೆ ಇಲ್ಲದೆ ಪಕ್ಷ ಸೇರ್ಪಡೆಗೆ ಭಾಸ್ಕರ್ ರಾವ್ ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದ್ದು, ಬುಧವಾರ ಬೆಳಗ್ಗೆಯೇ ಅವರು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಪೃಥ್ವಿ ರೆಡ್ಡಿ ಆಪ್ ರಾಜ್ಯಾಧ್ಯಕ್ಷರಾಗಿ ಮುಂದುವರಿದ ಬಳಿಕ ಪಕ್ಷದ ಚಟುವಟಿಕೆಗಳಿಂದ ತುಸು ದೂರವಾಗಿದ್ದ ಭಾಸ್ಕರ್ ರಾವ್, ಚುನಾವಣ ಹೊಸ್ತಿಲಲ್ಲಿ ಬಿಜೆಪಿ ಸೇರುತ್ತಿದ್ದಾರೆ.
ರಾಜ್ಯ ಚುನಾವಣ ಸಹ ಉಸ್ತುವಾರಿ, ನಿವೃತ್ತ ಐಪಿಎಸ್ ಕೆ. ಅಣ್ಣಾಮಲೈ ಅವರು ಭಾಸ್ಕರ್ ರಾವ್ ಬಿಜೆಪಿ ಸೇರ್ಪಡೆ ಹಿಂದೆ ಮಹತ್ವದ ಪಾತ್ರ ವಹಿಸಿದ್ದಾರೆಂದು ಹೇಳಲಾಗಿದೆ. ಮಂಗಳವಾರ ಬೆಳಗ್ಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಅಣ್ಣಾಮಲೈ ಜತೆ ಭಾಸ್ಕರ್ ರಾವ್ ಚರ್ಚೆ ನಡೆಸಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಂಘ-ಪರಿವಾರದ ಹಿರಿಯರನ್ನು ಈ ಹಿಂದೆಯೇ ಅವರು ಭೇಟಿ ಮಾಡಿದ್ದರು ಎನ್ನಲಾಗಿದೆ.