Advertisement
ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು 1905ರಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿ ಆರಂಭಿಸಿದ್ದರು. 1956ರ ನವೆಂಬರ್ 1ರಂದು ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ನೂತನವಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
Related Articles
Advertisement
1973ರ ನವೆಂಬರ್ 1ರಂದು ರಾಜ್ಯದ ಹೆಸರನ್ನು “ಕರ್ನಾಟಕ” ಎಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ದೇವರಾಜ್ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದ ಏಕೀಕರಣಕ್ಕಾಗಿ ಅನಕೃ, ಕೋಟ ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ ಸೇರಿದಂತೆ ಹಲವಾರು ಗಣ್ಯರು ಶ್ರಮಿಸಿದ್ದರು.
ಆಲೂರು ವೆಂಕಟರಾಯರು:
ಆಲೂರು ವೆಂಕಟರಾಯರು ಕನ್ನಡ ಸಾಹಿತ್ಯ ಲೋಕದ ಪ್ರಮುಖರಲ್ಲೊಬ್ಬರು. ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ವಲಯದಲ್ಲಿ ನೀಡಿರುವ ಕಾಯಕಲ್ಪದಿಂದ ಕನ್ನಡ ಕುಲಪುರೋಹಿತ ಎಂಬ ಗೌರವಾನ್ವಿತ ಸ್ಥಾನ ಪಡೆದುಕೊಂಡಿದ್ದಾರೆ. ಆಲೂರು ವೆಂಕಟರಾಯರು 1880ರ ಜುಲೈ 12ರಂದು ವಿಜಯಪುರದಲ್ಲಿ ಜನಿಸಿದ್ದರು. ಇವರ ವಂಶಜರು ಧಾರವಾಡ ಸಮೀಪದ ಆಲೂರ(ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ)ಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ತಂದೆ ಭೀಮರಾಯ, ತಾಯಿ ಭಾಗೀರಥಮ್ಮ.
1921ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಸತ್ಯಾಗ್ರಹ ಚಳವಳಿಯಲ್ಲಿ ಆಲೂರು ಭಾಗವಹಿಸಿದ್ದರು. ಕರ್ನಾಟಕ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಕರ್ನಾಟಕ ವಿವಿ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ(ಧಾರವಾಡ) ಯೋಜನೆಗಳಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದರು.