ನಾವೀಗ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಬಾರಿ 66ನೇ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ರವಿವಾರ ರಾಜ್ಯ ಸರಕಾರ ರಾಜ್ಯೋತ್ಸವ ಪುರಸ್ಕೃತರ ಹೆಸರುಗಳನ್ನೂ ಪ್ರಕಟಿಸಲಾಗಿದೆ. ಇವರಿಗೆಲ್ಲ ಸೋಮವಾರ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕೇಂದ್ರ ಸರಕಾರ ನೀಡುವ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಯಂತೆ ಈ ಬಾರಿಯೂ ಕರ್ನಾಟಕ ಸರಕಾರ, ಎಲೆಮರೆಯ ಕಾಯಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಪ್ರಶಂಸನೀಯವೇ ಸರಿ. ವಿಶೇಷವೆಂದರೆ ಹಲವಾರು ಮಂದಿಗೆ ರಾಜ್ಯೋತ್ಸವ ಪುರಸ್ಕೃತರ ಹೆಸರೂ ಗೊತ್ತಿರಲಿಕ್ಕಿಲ್ಲ.
ಇದೇ ಮೊದಲ ಬಾರಿಗೆ ಎಂಬಂತೆ ರಾಜ್ಯ ಸರಕಾರ, ರಾಜ್ಯೋತ್ಸವ ಪ್ರಶಸ್ತಿಗಾಗಿ ಹೆಸರುಗಳನ್ನು ಶಿಫಾರಸು ಮಾಡುವಂತೆ ಜನರಲ್ಲಿ ಮನವಿ ಮಾಡಿತ್ತು. ಸೇವಾ ಸಿಂಧು ಮೂಲಕ ಶಿಫಾರಸು ಮಾಡಬಹುದು ಎಂದಿತ್ತು. ಇದರಲ್ಲಿ ಒಟ್ಟು 4,500 ಹೆಸರುಗಳು ಪ್ರಶಸ್ತಿಗಾಗಿ ಶಿಫಾರಸುಗೊಂಡಿದ್ದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಅವರ ನೇತೃತ್ವದ ಸಮಿತಿ ಈ ಹೆಸರುಗಳನ್ನು ಪರಿಶೀಲಿಸಿ ಕಡೆಗೆ ರಾಜ್ಯೋತ್ಸವ ಪುರಸ್ಕೃತರ ಹೆಸರುಗಳನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್: ನಿರ್ಗಮನ ಬಾಗಿಲಲ್ಲಿ ನಿಂತ ಭಾರತ
ಸಾಹಿತ್ಯ ವಲಯದಲ್ಲಿ ಆರು ಮಂದಿಗೆ, ರಂಗಭೂಮಿಯ ಐವರಿಗೆ, ಜಾನಪದ ಕ್ಷೇತ್ರದಲ್ಲಿ ಏಳು ಮಂದಿಗೆ, ಸಂಗೀತ ಕ್ಷೇತ್ರದಲ್ಲಿ ಇಬ್ಬರು, ಶಿಲ್ಪಕಲೆಯಲ್ಲಿ ಇಬ್ಬರು, ಸಮಾಜ ಸೇವೆಯಲ್ಲಿ ಐವರು, ವೈದ್ಯಕೀಯ ಕ್ಷೇತ್ರದಲ್ಲಿ ಆರು ಮಂದಿ, ಕ್ರೀಡೆಯಲ್ಲಿ ನಾಲ್ವರು, ಸಿನೆಮಾದಲ್ಲಿ ಒಬ್ಬರು, ಶಿಕ್ಷಣದಲ್ಲಿ ಮೂವರು, ಸಂಕೀರ್ಣ ವಿಭಾಗದಲ್ಲಿ ಮೂವರು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇಬ್ಬರು, ಕೃಷಿಯಲ್ಲಿ ಮೂವರು, ಪರಿಸರದಲ್ಲಿ ಇಬ್ಬರು, ಪತ್ರಿಕೋದ್ಯಮದಲ್ಲಿ ಇಬ್ಬರು, ನ್ಯಾಯಾಂಗ, ಆಡಳಿತ, ಸೇನೆ, ಯಕ್ಷಗಾನ, ಪೌರ ಕಾರ್ಮಿಕ, ಉದ್ಯಮ, ಕಲ್ಯಾಣ ಕರ್ನಾಟಕ ಏಕೀಕರಣ ಹೋರಾಟದಲ್ಲಿ ತಲಾ ಒಬ್ಬರು, ಹೊರನಾಡು ಕನ್ನಡಿಗ ವಿಭಾಗದಲ್ಲಿ ನಾಲ್ವರು, ಯೋಗದಲ್ಲಿ ಇಬ್ಬರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಕೊರೊನಾ ಕಾಲದಲ್ಲಿ ಜನರಿಗೆ ನಿಸ್ವಾರ್ಥ ಸೇವೆ ಮಾಡಿದ ವೈದ್ಯರು, ಕಳೆದ 50 ವರ್ಷಗಳಿಂದ ಶಿಲ್ಪಕಲೆಯನ್ನೇ ನಂಬಿ ಜೀವನ ಮಾಡುತ್ತಿರುವ ಶಿಲ್ಪಿ, 15 ಲಕ್ಷಕ್ಕೂ ಹೆಚ್ಚು ಬಡವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸೂಲಗಿತ್ತಿ ಯಮುನವ್ವ, ಜಾನಪದ ಕಲಾವಿದರು, ಮುಂದಿನ ಮಾರ್ಚ್‌ಗೆ ನಿವೃತ್ತಿಯಾಗಲಿರುವ ಯಾದಗಿರಿಯ ಪೌರ ಕಾರ್ಮಿಕ ಮಹಿಳೆ, ಸಾವಯವ ಕೃಷಿ ಮಾಡುತ್ತಿರುವ ಕೃಷಿಕ ಹೀಗೆ ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಪ್ರಶಸ್ತಿ ಪಟ್ಟಿಯನ್ನು ನೋಡಿದರೆ, ಸರಕಾರ ಯಾವುದೇ ಪ್ರಭಾವಗಳಿಗೆ ಮಣಿಯದೇ ಆಯ್ಕೆ ಮಾಡಿರುವುದು ಕಂಡು ಬಂದಿದೆ. ಮುಂದೆಯೂ ಇದೀ ರೀತಿಯಲ್ಲೇ ಪ್ರಶಸ್ತಿ ನೀಡಿದರೆ, ಪ್ರಶಸ್ತಿಗೂ ಒಂದು ಗೌರವ ಬಂದಂತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇದರ ಜತೆಗೆ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ 10 ಸಂಘ ಸಂಸ್ಥೆಗಳಿಗೆ ಈ ವರ್ಷಕ್ಕೆ ಅನ್ವಯವಾಗುವ ರೀತಿಯಲ್ಲಿ ಪ್ರಶಸ್ತಿ ನೀಡಲಾಗಿದೆ.