Advertisement
ಸ್ಥಾಪನೆಯಾದ ಆರಂಭದಲ್ಲಿ ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸಿದ ಸಂಸ್ಥೆ ಆ ಬಳಿಕ ತನ್ನ ಕಾರ್ಯವೈಖರಿಯ ಬದಲಾಗಿ ವಿವಾದ, ಹಗರಣಗಳಿಂದಲೇ ಕುಖ್ಯಾತಿ ಪಡೆಯುವಂತಾಯಿತು. ಇತ್ತೀಚಿನ ದಶಕಗಳಲ್ಲಂತೂ ಕೆಪಿಎಸ್‌ಸಿಗೆ ರಾಜ್ಯದ ಜನತೆ ಹಿಡಿಶಾಪ ಹಾಕುತ್ತಿದ್ದು ಸಂಸ್ಥೆಯ ಔಚಿತ್ಯವನ್ನೇ ಪ್ರಶ್ನಿಸತೊಡಗಿದ್ದಾರೆ. ಅಷ್ಟು ಮಾತ್ರವಲ್ಲದೆ ಸರಕಾರದ ಪಾಲಿಗೆ ಕೆಪಿಎಸ್‌ಸಿ ಬಿಳಿಯಾನೆಯಾಗಿ ಮಾರ್ಪಟ್ಟಿದೆ.
ಇದರಿಂದಾಗಿ ಅದೆಷ್ಟೋ ಅರ್ಹ ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗುವಂತಾಗಿದೆ. ಹಲವು ಪ್ರಕರಣಗಳಲ್ಲಿ ಉದ್ಯೋಗಾಕಾಂಕ್ಷಿಗಳು ಕೋರ್ಟ್ ಮೆಟ್ಟಿಲೇರಿ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದಾರೆ. ಇದರ ಹೊರತಾಗಿಯೂ ಹಲವಾರು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕಾಲಮಿತಿಯೊಳಗೆ ನೇಮಕಾತಿ ಮಾಡಿಕೊಳ್ಳುವಲ್ಲಿ ಕೆಪಿಎಸ್‌ಸಿ ವಿಫಲವಾಗಿದೆ. ವಿಳಂಬ ಧೋರಣೆಗೆ ಕೆಪಿಎಸ್‌ಸಿ ಜೋತು ಬೀಳುತ್ತಿರುವುದರಿಂದಾಗಿ ಇಡೀ ನೇಮಕಾತಿ ಪ್ರಕ್ರಿಯೆಯೇ ಸ್ಥಗಿತಗೊಳ್ಳುವಂತಾಗಿದೆ. ಕಳೆದ ಐದಾರು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದಲ್ಲಿ ವಿವಿಧ ಇಲಾಖೆಗಳ 7 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಇನ್ನೂ ನೇಮಕಾತಿ ನಡೆದಿಲ್ಲ.
Related Articles
Advertisement
ಕೆಪಿಎಸ್‌ಸಿಯ ಕಾರ್ಯಶೈಲಿಯ ಬಗೆಗೆ ಸ್ಪಷ್ಟ ಅರಿವಿದ್ದರೂ ಸರಕಾರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ವ್ಯವಸ್ಥೆಗೆ ಚುರುಕು ಮೂಡಿ ಸುವ ನಿಟ್ಟಿನಲ್ಲಿ ಸರಕಾರದಿಂದ ಪ್ರಾಮಾಣಿಕ ಪ್ರಯತ್ನ ನಡೆಯದಿರುವುದು ತೀರಾ ಅಚ್ಚರಿಯೇ ಸರಿ. ಪ್ರತೀ ವರ್ಷ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯ ಭರವಸೆ ನೀಡುತ್ತಲೇ ಬರುವ ಸರಕಾರ ಖಾಲಿ ಇರುವ ಹುದ್ದೆಗಳಿಗೆ ಸಕಾಲದಲ್ಲಿ ನೇಮಕಾತಿ ಮಾಡಿಕೊಳ್ಳಲು ಮುಂದಾ ಗುತ್ತಿಲ್ಲ. ಇನ್ನಾದರೂ ಸರಕಾರ ಕೆಪಿಎಸ್‌ಸಿಯ ಜಿಡ್ಡುಗಟ್ಟಿದ ವ್ಯವಸ್ಥೆಗೆ ಸಾಣೆ ಹಿಡಿದು ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣ ಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಿವಿಧ ಕಾರಣಗಳಿಂದಾಗಿ ಬಾಕಿ ಉಳಿದಿರುವ ನೇಮಕಾತಿ ಪ್ರಕ್ರಿಯೆಗಿರುವ ಅಡಚಣೆಗಳನ್ನು ನಿವಾರಿಸಲು ಆದ್ಯತೆ ನೀಡುವ ಜತೆಯಲ್ಲಿ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವಂತೆ ಕೆಪಿಎಸ್‌ಸಿಗೆ ಸ್ಪಷ್ಟ ನಿರ್ದೇಶನ ನೀಡಬೇಕು.