Advertisement

ಬೈಂದೂರು: ನೆಂಪುವಿನಲ್ಲಿ ಇನ್ನು ಒಂದೇ ಕಡೆ 1-12ರವರೆಗೆ ಕಲಿಕೆ

02:40 AM Jul 25, 2018 | Team Udayavani |

ವಿಶೇಷ ವರದಿ – ಕೊಲ್ಲೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ವಂಡ್ಸೆ ಸಮೀಪದ ನೆಂಪು ಸರಕಾರಿ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಆರಂಭವಾಗಿದೆ. ಇದರಿಂದಾಗಿ 1ರಿಂದ 12ನೇ ತರಗತಿವರೆಗೆ ಒಂದೇ ಸೂರಿನಡಿ ಶಿಕ್ಷಣ ದೊರಕಲಿದ್ದು, ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣಗಳಿಗಾಗಿ ಅಲೆದಾಟ ತಪ್ಪಲಿದೆ. ಈ ಪ್ರಯೋಗ ಯಶಸ್ವಿಯಾದದ್ದೇ ಆದಲ್ಲಿ ಈ ಭಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿರುವ ಕಾರಣದಿಂದಲೂ ಸರಕಾರ ನೆಂಪು ಶಾಲೆಯನ್ನು ಈ ಯೋಜನೆಯಡಿ ಸೇರ್ಪಡೆಗೊಳಿಸಿದೆ.

Advertisement

ಒಟ್ಟು ವಿದ್ಯಾರ್ಥಿಗಳು
ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ಸಹಿತ ಇಲ್ಲಿ ಸುಮಾರು 530 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮಶಾಲೆಗೆ ಹೋಗುತ್ತಿರುವ ಸಂದರ್ಭ ವಿದ್ಯಾರ್ಥಿಗಳು ಬೇರೆಡೆ ಹೋಗದಂತೆ ನೋಡಿಕೊಳ್ಳುವಲ್ಲಿ ಎಸ್‌.ಡಿ.ಎಂ.ಸಿ. ಸದಸ್ಯಸರು ಹಾಗೂ ಹೆತ್ತವರು ಶಿಕ್ಷಕರೊಡನೆ ಸೇರಿ ಈ ಪ್ರಯತ್ನ ಮಾಡಲಾಗಿದ್ದು, ಶಾಲೆಯನ್ನು ಯೋಜನೆಯಡಿ ಸೇರ್ಪಡೆಗೊಳಿಸಲಾಗಿದೆ. ಇಲ್ಲಿ ಪದವಿಗೆ ಪಾಠ ಮಾಡುವವರು ಪ್ರೌಢಶಾಲೆಗೂ ಪಾಠ ಮಾಡುತ್ತಾರೆ. ರಾಜ್ಯದಲ್ಲಿ 176 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಯ್ಕೆ ಮಾಡಲಾಗಿದ್ದು ಅದರಲ್ಲಿ ಬೈಂದೂರಿನ ನೆಂಪು ಮತ್ತು ಕೋಟೇಶ್ವರದ ಸರಕಾರಿ ಶಾಲೆ ಸೇರ್ಪಡೆಗೊಂಡಿದೆ.

ಸರಕಾರಿ ಪದವಿ ಕಾಲೇಜು ಮತ್ತು ವಿದ್ಯಾರ್ಥಿನಿಲಯ ಅಗತ್ಯ
ಈ ಭಾಗದ ವಿವಿಧ ಗ್ರಾಮಗಳ ನಿವಾಸಿಗಳಿಗೆ ನೆಂಪು ಶಾಲೆ ಪ್ರಮುಖವಾಗಿದೆ. ಇದರೊಂದಿಗೆ ಸರಕಾರಿ ಪದವಿ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯದ ಅಗತ್ಯವಿದೆ. ಈ ಬಗ್ಗೆ ಬಹಳಷ್ಟು ವರ್ಷ ಗಳಿಂದ ಸ್ಥಳೀಯರು ಬೇಡಿಕೆ ಇಡುತ್ತಾ ಬಂದಿದ್ದಾರೆ. ಜತೆಗೆ ದೂರದ ವಿದ್ಯಾರ್ಥಿಗಳಿಗೆ ಇಲ್ಲೇ ತಂಗುವಂತೆ ವಿದ್ಯಾರ್ಥಿನಿಲಯ ಆರಂಭಿಸಿದಲ್ಲಿ ವಿದ್ಯಾರ್ಜನೆಗೆ ಹೆಚ್ಚಿನ ಸೌಲಭ್ಯ ಒದಗಿಸಿದಂತಾಗುತ್ತದೆ ಎನ್ನುವುದು ವಿದ್ಯಾಭಿಮಾನಿಗಳ ಅಭಿಮತ.

Advertisement

Udayavani is now on Telegram. Click here to join our channel and stay updated with the latest news.

Next