ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಮೊದಲೇ “ಶಾಕ್’!
ಪರೀಕ್ಷೆ ಬರೆಯಲು ಆಯ್ಕೆ ಮಾಡಿಕೊಂಡಿದ್ದ ಕೇಂದ್ರವೇ ಬೇರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೀಡಿರುವ
ಕೇಂದ್ರವೇ ಬೇರೆಯಾಗಿದ್ದು, ಕಳೆದ ಮೂರು ವರ್ಷದಿಂದ ಉಪನ್ಯಾಸಕರ ಹುದ್ದೆಗಾಗಿ ಕಾದು ಕುಳಿತಿರುವ ಸಾವಿರಾರು ಅಭ್ಯರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ. 2015ರಲ್ಲಿ ನೇಮಕಾತಿಗೆ ಅಧಿಸೂಚನೆಯಾಗಿದ್ದರೂ,
ಈವರೆಗೂ ನೇಮಕಾತಿ ನಡೆದಿಲ್ಲ. ಅರ್ಜಿ ಆಹ್ವಾನ, ಶುಲ್ಕಪಾವತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧ
ಮೂರ್‍ನಾಲ್ಕು ಬಾರಿ ಪ್ರತ್ಯೇಕ ಸುತ್ತೋಲೆ ಹೊರಡಿಸಿ, ರದ್ದು ಮಾಡಲಾಗಿತ್ತು. 2015ರಿಂದಲೂ ನೇಮಕಾತಿ ಪ್ರಕ್ರಿಯೆ
ಗೊಂದಲದ ಗೂಡಾಗಿಯೇ ಉಳಿದಿದೆ.
ಕನ್ನಡ, ಇಂಗ್ಲಿಷ್, ಉರ್ದು, ಗಣಿತ, ರಸಾಯಶಾಸ್ತ್ರ, ವಾಣಿಜ್ಯಶಾಸ್ತ್ರ ಸಹಿತವಾಗಿ 20 ವಿಷಯಗಳಲ್ಲಿ ಖಾಲಿ ಇದ್ದ 1,204 ಹುದ್ದೆಗೆ 18,800 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ತಾಂತ್ರಿಕ ಸಮಸ್ಯೆ ಸಹಿತವಾಗಿ ಎಲ್ಲವೂ ಸರಿಯಾಗುತ್ತಿದೆ ಎನ್ನುವಷ್ಟರಲ್ಲಿ ಅಭ್ಯರ್ಥಿಗಳಲ್ಲಿ ಹೊಸ ಆತಂಕ ಸೃಷ್ಟಿಯಾಗಿದೆ.
ಮಂಗಳೂರು ಕೇಂದ್ರ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಬೆಂಗಳೂರು, ಮೈಸೂರು, ಶಿವಮೊಗ್ಗ ಅಥವಾ ಧಾರವಾಡ ಹೀಗೆ ಹೊರ ಜಿಲ್ಲೆಯ ಪರೀಕ್ಷಾ ಕೇಂದ್ರ ನಿಗದಿ ಮಾಡಲಾಗಿದೆ. ಅದೇ ರೀತಿ ಮೈಸೂರು, ಧಾರವಾಡ, ಹುಬ್ಬಳ್ಳಿ, ಉಡುಪಿ,ಬೆಂಗಳೂರು ಕೇಂದ್ರ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳ ಕೇಂದ್ರವೂ ಬದಲಾಗಿದೆ. ಒಂದು ವಾರಗಳ ಕಾಲ ಪರೀಕ್ಷೆ ಇರುವುದರಿಂದ ಕೇಂದ್ರ ಬದಲಾಗಿರುವುದು ಸಾಕಷ್ಟು ಸಮಸ್ಯೆ ಉಂಟುಮಾಡಿದೆ. ಬೇರೆ ಜಿಲ್ಲೆಗಳಿಗೆ ಹೋಗಿ ಪರೀಕ್ಷೆ ಬರೆಯಬೇಕಾದರೆ ಅದಕ್ಕೂ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ನೊಂದ ಅಭ್ಯರ್ಥಿಗಳು ದೂರಿದ್ದಾರೆ.
ಗೊಂದಲಕ್ಕೆ ಕಾರಣ: ಉಪನ್ಯಾಸಕರ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಿದ್ದ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳಲ್ಲೂಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿತ್ತು. ಹೀಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಅನುಕೂಲತೆಗೆ ತಕ್ಕಂತೆ ಆಯಾ ಜಿಲ್ಲೆಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ತದನಂತರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ಕಾರದ ಸೂಚನೆಯಂತೆ ಪರೀಕ್ಷಾ ಕೇಂದ್ರದ ಸಂಖ್ಯೆಯನ್ನು 30ರ ಬದಲಿಗೆ 8ಕ್ಕೆ ಇಳಿಸಿತ್ತು. ಹೀಗಾಗಿ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರದ
ಅದಲು ಬದಲಾಗಿದೆ.
●ರಾಜು ಖಾರ್ವಿ ಕೊಡೇರಿ