ಕಾಪು : ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೀನುಗಾರರಿಗೆ ಹತ್ತು ಲಕ್ಷ ರೂಪಾಯಿ ಜೀವ ವಿಮೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ಮತ್ತು 25 ರೂಪಾಯಿ ಸಬ್ಸಿಡಿಯೊಂದಿಗೆ 500 ಲೀಟರ್ ಡೀಸೆಲ್ ವಿತರಿಸುತ್ತೇವೆ ಎಂದು ಕಾಂಗ್ರೆಸ್ ಅಗ್ರಗಣಿ ನಾಯಕ ರಾಹುಲ್ ಗಾಂಧಿ ಹೇಳಿದರು.
ಕಾಪು ವಿಧಾನಸಭಾ ಕ್ಷೇತ್ರದ ಉಚ್ಚಿಲ ದಲ್ಲಿ ಆಯೋಜಿಸಲಾಗಿದ್ದ ಮೀನುಗಾರರೊಂದಿಗಿನ ಸಂವಾದ ಕಾರ್ಯಕ್ರಮ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಭಾಷಣದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗಾಗಿ ಈಗಾಗಲೇ ನಾಲ್ಕು ಗ್ಯಾರಂಟಿ ಘೋಷಣೆಗಳನ್ನು ಘೋಷಿಸಿದ್ದು, ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಗ್ಯಾರಂಟಿ ಕಾರ್ಡ್ ನಲ್ಲಿ ಘೋಷಿಸಿರುವ ನಾಲ್ಕು ಘೋಷಣೆಗಳನ್ನು ಪೂರ್ಣಗೊಳಿಸಲು ನಾವು ಬದ್ಧರಿದ್ದೇವೆ ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವು ಹಣಬಲ ಮತ್ತು ತೋಳ್ಬಲದ ಮೂಲಕವಾಗಿ ಅಧಿಕಾರಕ್ಕೆ ಬಂದಿದ್ದು ಅದಕ್ಕಾಗಿಯೇ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ, ಅಧಿಕಾರಕ್ಕೆ ಬಂದ ಕೂಡಲೇ ಉತ್ತಮ ಯೇಜನೆಗಳನ್ನು ಜಾರಿಗೆ ತಂದು ಜನರ ಮನಸ್ಸು ಗೆಲ್ಲುವ ಪ್ರಯತ್ನ ನಡೆಸುತ್ತೇವೆ ಎಂದರು.
ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಉಡುಪಿ ಕ್ಷೇತ್ರದ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಎಂ., ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಪ್ರತಾಪ್ ಚಂದ್ರ ಶೆಟ್ಟಿ, ಟಿ. ಎನ್. ಪ್ರತಾಪನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರಮುಖರಾದ ಎಂ.ಎ. ಗಫೂರ್, ದೇವಿಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ನವೀನ್ ಚಂದ್ರ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಭಾವನಾ, ಗೀತಾ ವಾಗ್ಲೆ, ವೆರೋನಿಕಾ ಕರ್ನೇಲಿಯೋ, ದೀಪಕ್ ಕೋಟ್ಯಾನ್, ಪ್ರಶಾಂತ ಜತ್ತನ್ನ, ಮಂಜುನಾಥ ಸೊಣೇಗಾರ್, ವಿಶ್ವಾಸ್ ಅಮೀನ್, ಸರಳಾ ಕಾಂಚನ್, ಶಿವಾಜಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.