ಬೆಂಗಳೂರು: ವಿಧಾನಸಭೆ ಚುನಾವಣೆಯ ಮತದಾನ ಬಹುತೇಕ ಶಾಂತಿ ಯುತ ವಾಗಿ ಮುಕ್ತಾಯವಾಗಿದೆ. ಸರಾಸರಿ ಶೇ. 72.67 ಮತದಾನ ದಾಖಲಾಗಿದೆ. ಇದರೊಂದಿಗೆ 2,615 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದಂತಾಗಿದೆ.
224 ಕ್ಷೇತ್ರಗಳ 58,545 ಮತಗಟ್ಟೆಗಳಲ್ಲೂ ಮತದಾನ ಮುಗಿದಿದೆ. ಈ ಬಾರಿ ಎಲ್ಲೂ ಮರು ಮತದಾನ ಇಲ್ಲದಿರುವುದು ವಿಶೇಷ. ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನ ಕಂಡುಬಂದಿದೆ.
ತೀವ್ರ ಜಿದ್ದಾಜಿದ್ದಿಯ ವರುಣ ಕ್ಷೇತ್ರದಲ್ಲಿ ಮತಗಟ್ಟೆ ಕೇಂದ್ರಕ್ಕೆ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪ್ರವೇಶವನ್ನು ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಸಿದ್ದರಿಂದ 2 ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಸ್ವಲ್ಪ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದು, ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಮತ ಎಣಿಕೆ
ಶನಿವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
ದ.ಕ., ಉಡುಪಿ: ಮತದಾನ ಸುಗಮ
ಮಂಗಳೂರು/ಉಡುಪಿ: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮತ ದಾನ ಶಾಂತಿ ಯುತವಾಗಿ ನಡೆಯಿತು. ಬಿರು ಬಿಸಿಲಿನ ನಡುವೆಯೂ ಮತದಾರರು ಉತ್ಸಾಹ ದಿಂದ ಆಗಮಿಸಿ ಹಕ್ಕು ಚಲಾಯಿಸಿದರು.