ಮಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸ್ಯಾಟಲೈಟ್ ಫೋನ್ ಮತ್ತೆ ಕಾರ್ಯಾಚರಿಸಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದೆ ಎಂದು ತಿಳಿದುಬಂದಿದೆ.
ದ.ಕ., ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ದಟ್ಟ ಅರಣ್ಯ ಪ್ರದೇಶದಲ್ಲಿ ವಾರದ ಹಿಂದೆ ವಿದೇಶಕ್ಕೆ ಸ್ಯಾಟಲೈಟ್ ಫೋನ್ ಮೂಲಕ ಮಾತನಾಡಿರುವುದು ಪತ್ತೆಯಾಗಿದ್ದು ಉಗ್ರ ಸಂಘಟನೆಯೊಂದಿಗಿನ ಸಂಪರ್ಕಕ್ಕೆ ಬಳಸಿರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರಾವಳಿಯಲ್ಲಿ ಕಳೆದ 6 ತಿಂಗಳಲ್ಲಿ 4ನೇ ಬಾರಿ ನಿಷೇಧಿತ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ಈ ಬಾರಿ ದ.ಕ. ಜಿಲ್ಲೆಯ 2 ಕಡೆಗಳಲ್ಲಿ, ಚಿಕ್ಕಮಗಳೂರು ಜಿಲ್ಲೆಯ 2 ಕಡೆಗಳಲ್ಲಿ ಲೊಕೇಶನ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕರಾವಳಿ, ಮಲೆನಾಡಿನ ವಿವಿಧೆಡೆ ಕಳೆದ ಹಲವು ವರ್ಷಗಳಿಂದ ಆಗಾಗ್ಗೆ ಸ್ಯಾಟಲೈಟ್ ಫೋನ್ ಸಂಪರ್ಕದ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಸೆ. 21ರಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದ ಗೃಹಸಚಿವ ಆರಗ ಜ್ಞಾನೇಂದ್ರ, “2020 ಮತ್ತು 2021ರಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಿಂದ ಒಟ್ಟು 476 ಬಾರಿ ಸ್ಯಾಟಲೈನ್ ಫೋನ್ ಬಳಕೆಯಾಗಿದೆ. ದ.ಕ. ಸೇರಿದಂತೆ ಕರಾವಳಿ ಭಾಗದಲ್ಲಿಯೂ ಆಗಾಗ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಕುರಿತ ವರದಿಗಳು ಗಮನಕ್ಕೆ ಬಂದಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದ್ದರು.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 451 ಹೊಸ ಪ್ರಕರಣ | 1455 ಸೋಂಕಿತರು ಗುಣಮುಖ
ಸೂಚನೆ ಬಂದಿಲ್ಲ: ಎಸ್‌ಪಿ
ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವ ಬಗ್ಗೆಯಾಗಲಿ, ಕಟ್ಟೆಚ್ಚರದ ಕುರಿತಾಗಲಿ ಗುಪ್ತಚರ ಇಲಾಖೆಯಿಂದ ಮಾಹಿತಿ/ ಸೂಚನೆ ಬಂದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.