Advertisement

ಕರಾವಳಿಯ ಮೂವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ

10:37 AM Dec 15, 2018 | |

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ರಂಗ ಭೂಮಿಯ ಹಿರಿಯ ನಿರ್ದೇಶಕ ಪಿ. ಗಂಗಾಧರ ಸ್ವಾಮಿ ಅವರು ಅಕಾಡೆಮಿ ನೀಡುವ ಜೀವಮಾನ ಸಾಧನೆ ಗೌರವಕ್ಕೆ ಭಾಜನರಾಗಿದ್ದಾರೆ. ಉಡುಪಿಯ ಹಿರಿಯ ರಂಗಸಾಧಕ ಟಿ.ಪ್ರಭಾಕರ್‌ ಕಲ್ಯಾಣಿ, ದ.ಕ. ಜಿಲ್ಲೆಯ ಹವ್ಯಾಸಿ ರಂಗ ನಿರ್ದೇಶಕಿ, ನಟಿ ಉಷಾ ಭಂಡಾರಿ, ಮುಂಬಯಿಯ ಮೋಹನ್‌ ಮಾರ್ನಾಡು ಸಹಿತ 24 ಮಂದಿ ರಂಗಸಾಧಕರು ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಉಷಾ ಭಂಡಾರಿ
ಮಂಗಳೂರು: ಕರಾವಳಿ ಮೂಲದ, ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಖ್ಯಾತ ರಂಗಭೂಮಿ ಕಲಾವಿದೆ, ನಿರ್ದೇಶಕಿ, ನಟಿ ಉಷಾ ಭಂಡಾರಿ ಅವರಿಗೆ ಪ್ರಸಕ್ತ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಒಲಿದಿದೆ. ಅವರು ಮಂಗಳೂರಿನ ನಾಟಕ ನಿರ್ದೇಶಕ, ನಟ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಅವರ ಸಂಬಂಧಿ. ಉಷಾ ಭಂಡಾರಿ ಮೂಲತಃ ತೊಕ್ಕೊಟ್ಟಿನವರಾಗಿದ್ದು, ಮಂಗಳೂರಿನ ಸಂತ ಆ್ಯಗ್ನೆಸ್‌ ಕಾಲೇಜಿನಲ್ಲಿ ನಾಟಕ ತರಬೇತಿ ಪಡೆದಿದ್ದಾರೆ. ಬೆಂಗಳೂರು ವಿ.ವಿ.ಯಲ್ಲಿ ರಂಗಭೂಮಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ನಾಟಕ, ಭರತನಾಟ್ಯ, ಧಾರಾವಾಹಿ, ಚಲನಚಿತ್ರ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಪಳಗಿದ್ದಾರೆ. ಅವರು ಮಂಗಳೂರು, ಮೈಸೂರು ಆಕಾಶವಾಣಿಯಲ್ಲಿ ಉದ್ಘೋಷಕರಾಗಿ, ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಸೀನಿಯರ್‌ ಫೆಲೊ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಉಷಾ ಭಂಡಾರಿ ಅವರು ಯಾಸ್ಮಿನ್‌, ತುಘಲಕ್‌, ಬಿರುಗಾಳಿ, ಡೊಂಬರಚೆನ್ನಿ, ಕಾಗೆಗಳು, ಸೂರ್ಯ ಶಿಕಾರಿ, ಅಗ್ನಿ ಮತ್ತು ಮಳೆ, ನಾದಮೃದಂಗ, ಯಯಾತಿ, ನಾಗಮಂಡಲ, ಅಗ್ನಿಲೋಕ, ಮೇಘಧೂತ ಇತ್ಯಾದಿ ಕನ್ನಡ ನಾಟಕಗಳಲ್ಲಿ ಹಾಗೂ ಪಿಲಿ ಪತ್ತಿ ಗಡಸ್‌, ಒರಿಯೊರ್ದೊರಿ ಅಸಲ್‌ ಸೇರಿದಂತೆ ವಿವಿಧ ತುಳು ನಾಟಕಗಳಲ್ಲಿ ನಟಿಸಿದ್ದಾರೆ. ಹಲವು ನಾಟಕಗಳನ್ನು ನಿರ್ದೇಶಿಸಿದ್ದು, ಧಾರವಾಹಿ, ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಕ್ಕಳ ಚಿತ್ರ “ನಕ್ಕಳಾ ರಾಜ ಕುಮಾರಿ’, ಮತ್ತು ತುಳು ಚಿತ್ರ “ಮದಿಮೆ’ ಮತ್ತಿತರ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ. ಉಷಾ ಭಂಡಾರಿ ಅವರಿಗೆ ನಾದಮೃದಂಗ ಕಿರುಚಿತ್ರದ ಅಭಿನಯಕ್ಕೆ ಉತ್ತಮ ನಟಿ ಪ್ರಶಸ್ತಿ ಮದಿಮೆ ತುಳು ಚಲನಚಿತ್ರದ ನಟನೆಗೆ ಬೆಸ್ಟ್‌ ಸಪೋರ್ಟಿಂಗ್‌ ನಟಿ ಪ್ರಶಸ್ತಿ ದೊರೆತಿದೆ.

ರಂಗನಟ ಮೋಹನ್‌ ಮಾರ್ನಾಡ್‌
ಮುಂಬಯಿ: ಮೋಹನ ಮಾರ್ನಾಡ್‌ ಅವರು ಮೂಲತಃ ಮೂಡುಬಿದಿರೆ ಸಮೀಪದ ಮೂಡುಮಾರ್ನಾಡಿನವರು. 1964 ಫೆಬ್ರವರಿ 21ರಂದು ಜನಿಸಿ ದರು. ಎಳವೆಯಲ್ಲಿಯೇ ಕಲೆ ಸಂಸ್ಕೃತಿ ಕುರಿತಾದ ಒಲವು ಹೊಂದಿದ್ದು ಏಕಪಾತ್ರಾಭಿನಯ, ಭಾಷಣ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.


1977ರಲ್ಲಿ 6ನೇ ತರಗತಿ ಮುಗಿಸಿ ಮುಂಬಯಿಗೆ ಬಂದ ಅವರು ದುಡಿಮೆಯ ಜತೆಗೆ ಪದವಿಯನ್ನು ಪಡೆದರು. ಜತೆಗೆ ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದು, ಕಲಾಜಗತ್ತು ಸಂಸ್ಥೆಯಲ್ಲಿ ಪ್ರಧಾನ ನಟರಾಗಿದ್ದರು. ಕನ್ನಡದ “ಮಿಲನ’, ತುಳುವಿನ “ಯಮಲೋಕೊಡು ಪೊಲಿಟಿಕ್ಸ್‌’ ಹಾಗೂ “ಕಲುವೆರೆ ಕುಂಟು ಮಡಿ ಮಲ್ಪುನಾಯೆ’ ಅವರು ಬರೆದ ಪ್ರಮುಖ ನಾಟಕಗಳು. ಮೂರು ದಶಕಗಳ ಹಿಂದೆ ಮುಂಬಯಿ ರಂಗಭೂಮಿಯ “ಸೂಪರ್‌ ಸ್ಟಾರ್‌ ಕನ್ನಡಿಗ’ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು. 374ಕ್ಕೂ ಅಧಿಕ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. “ಅಭಿನಯ ಚಕ್ರವರ್ತಿ’ ಪ್ರಶಸ್ತಿ, “ಸಮಾಜ ರತ್ನ’ ರಾಜ್ಯ ಪ್ರಶಸ್ತಿಗಳು ಲಭಿಸಿವೆ.ಅವರು ನಿರ್ಮಿಸಿದ “ಸುದ್ದ’ ಡಿಜಿಟಲ್‌ ಚಲನಚಿತ್ರ 2006ರಲ್ಲಿ ಏಷ್ಯನ್‌ ಚಿತ್ರೋ ತ್ಸವದಲ್ಲಿ ಭಾರತೀಯ ವಿಭಾಗದ ಶ್ರೇಷ್ಠ ಚಲನಚಿತ್ರವೆಂದು ಪ್ರಶಸ್ತಿ ಪಡೆದಿದೆ. 

ನಾಟಕ ರಂಗದ ಪ್ರಭಾಕರ ಕಲ್ಯಾಣಿ


ಉಡುಪಿ:  ಪೆರ್ಡೂರು ಮೂಲದ ಪಿ. ಪ್ರಭಾಕರ ಕಲ್ಯಾಣಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲ್ಯಾಣಿ ಅವರು ಎಳವೆಯಿಂದಲೂ ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ತನ್ನ 11ನೆಯ ವಯಸ್ಸಿನಲ್ಲಿ “ಪುನರ್ಜನ್ಮ’ ನಾಟಕದಲ್ಲಿ ಅಭಿನಯಿಸಿ ತಾಲೂಕು ಮಟ್ಟದ ಹಿ.ಪ್ರಾ. ಶಾಲಾ ಮಟ್ಟದ ಸ್ಪರ್ಧೆಯಲ್ಲಿ ನಟನೆಗೆ ಪ್ರಥಮ ಬಹುಮಾನ ಗಳಿಸಿದವರು. ಸುಮಾರು 400 ಕನ್ನಡ/ ತುಳು ನಾಟಕದಲ್ಲಿ ಅಭಿನಯಿಸಿ ಉತ್ತಮ ನಟ/ ನಿರ್ದೇಶನ/ ರಂಗಸಜ್ಜಿಕೆ, ನಾಟಕ ರಚನೆಗೆ ಬಹುಮಾನ ಪಡೆದಿದ್ದಾರೆ. 28 ವರ್ಷಗಳಿಂದ ಕೂಡಿª ಕಲಾವಿದೆರ್‌ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಟಕ ಅಕಾಡೆಮಿಯ ಜಿಲ್ಲಾ ಸಂಚಾಲಕರಾಗಿ, ಮಂಗಳೂರಿನ ತುಳು ನಾಟಕ ಕಲಾವಿದರ ಒಕ್ಕೂಟದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕಲ್ಯಾಣಿಯವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಲ್ಯಾಣಿಯವರು ವಿಜಯ ಬ್ಯಾಂಕ್‌ನ ಕಾರ್ಕಳ ತಾಲೂಕು ದೊಂಡೇರಂಗಡಿ ಶಾಖೆಯಲ್ಲಿ ಸಹಾಯಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next