Advertisement

ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ: ಅರ್ಥಪೂರ್ಣ ಆಚರಣೆ

08:12 PM Jun 09, 2023 | Team Udayavani |

ಬೆಂಗಳೂರು: ಮೈಸೂರು ರಾಜ್ಯವು “ಕರ್ನಾಟಕ ‘ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲು ಸೂಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

Advertisement

ಕನ್ನಡ ಭವನದಲ್ಲಿ ಇಲಾಖೆಯ ಆಯವ್ಯಯ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ರಾಜ್ಯ 1973ರ ಅ.20ರಂದು ಕರ್ನಾಟಕ ಎಂದು ಮರುನಾಮಕರಣಗೊಂಡಿದ್ದು, ಈಗ 50 ವರ್ಷ ಪೂರೈಸುತ್ತಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಸಾರುವಂತಹ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ವರ್ಷವಿಡೀ ಆಯೋಜಿಸಲು ಸೂಕ್ತ ರೂಪುರೇಷೆಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಾರಿ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಕೋರಲಾಗುವುದು. ಆ ಮೂಲಕ ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು ವ್ಯಾಪಕವಾಗಿ ಮತ್ತು ಹೆಚ್ಚು ಆಕರ್ಷಣೀಯವಾಗಿ ಯೋಜಿಸಲು ಉದ್ದೇಶಿಸಲಾಗಿದೆ. ರವೀಂದ್ರ ಕಲಾ ಕ್ಷೇತ್ರವನ್ನು ನವೀಕರಿಸಿ ಅಲ್ಲಿನ ಆಸನ ವ್ಯವಸ್ಥೆ, ಧ್ವನಿ ಮತ್ತು ಬೆಳಕುಗಳ ಸುಧಾರಣೆ ಮಾಡಲು ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳು ಸಚಿವರಿಗೆ ಸೂಚಿಸಿದರು.

ಕರ್ನಾಟಕದ ಪರಂಪರೆ ಬಿಂಬಿಸುವ ಚಾಲುಕ್ಯ ಉತ್ಸವ, ಆನೆಗುಂದಿ ಉತ್ಸವ, ಲಕ್ಕುಂಡಿ ಉತ್ಸವ, ಹಂಪಿ ಉತ್ಸವ, ನವರಸಪುರ ಉತ್ಸವ, ಕದಂಬ ಉತ್ಸವ, ಇಟಗಿ ಉತ್ಸವ ಹಾಗೂ ಕನಕಗಿರಿ ಉತ್ಸವ ಮುಂತಾದ ಉತ್ಸವಗಳನ್ನು ಇನ್ನು ಮುಂದೆ ನಿಗದಿತ ದಿನಾಂಕಗಳಂದು ಪ್ರವಾಸಿಗರ ಅನುಕೂಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯೋಜಿಸಬೇಕು. ವೇಳಾಪಟ್ಟಿ ಸಿದ್ಧಪಡಿಸಬೇಕೆಂದು ಅವರು ಹೇಳಿದರು.
ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕ ಭಾಗಗಳಲ್ಲಿ ಜಾನಪದ ಲೋಕ ಸ್ಥಾಪನೆಗೆ ಸೂಕ್ತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ| ಎನ್‌. ಮಂಜುಳಾ, ನಿರ್ದೇಶಕ ವಿಶ್ವನಾಥ ಪಿ. ಹಿರೇಮಠ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next