Advertisement

ಲೋಕಲಲ್ಲೂ ಮೈತ್ರಿ

06:00 AM Sep 05, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಪ್ರಯೋಗ ಬರೆ ರಾಜ್ಯಕ್ಕೆ ಸೀಮಿತವಲ್ಲ; ಇನ್ನು ಮುಂದೆ ಅದು ನಗರ ಸ್ಥಳೀಯ ಸಂಸ್ಥೆಗೂ ವಿಸ್ತರಿಸಲಿದೆ. ಅತಂತ್ರ ಪರಿಸ್ಥಿತಿ ತಲೆದೋರಿರುವ 30 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಎರಡು ಮಹಾನಗರ ಪಾಲಿಕೆಗಳು ಸೇರಿದಂತೆ 11 ಕಡೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಆಡಳಿತ ನೀಡಲು ಮುಂದಾಗಿದೆ. ಇದಲ್ಲದೇ, 5 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷೇತರರ ನೆರವಿನೊಂದಿಗೆ ಈ ಎರಡೂ ಪಕ್ಷಗಳು ಆಡಳಿತ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿದರೆ, ಒಂದು ಕಡೆ ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಹಾಗೂ ಇನ್ನು ಒಂದು ಸಂಸ್ಥೆಯಲ್ಲಿ ಕಾಂಗ್ರೆಸ್‌ ಮತ್ತು
ಕೆಪಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಇದರಿಂದಾಗಿ ಅತಂತ್ರ ಪರಿಸ್ಥಿತಿ ಉದ್ಭವಿಸಿರುವ 30 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 18 ಕಡೆಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಎಸ್‌ಪಿ ಮತ್ತು ಕೆಪಿಜೆಪಿ ಪಕ್ಷಗಳು ಆಡಳಿತಕ್ಕೆ ಬರುವುದು ಬಹುತೇಕ ಖಚಿತ. 

Advertisement

ಕಾಂಗ್ರೆಸ್‌ಗೆ ಇನ್ನಷ್ಟು ಅವಕಾಶ: ಹಾವೇರಿ, ಅಂಕೋಲಾ ಮತ್ತು ಕೊಟ್ಟೂರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ನಡೆಸಲು ಕಾಂಗ್ರೆಸ್‌ಗೆ ಕಾಲ ಕೂಡಿಬಂದಿದೆ. ಅಲ್ಲದೆ, ಸಂಕೇಶ್ವರ ಮತ್ತು ತೇರದಾಳ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಒಂದು ಸ್ಥಾನದ ಅವಶ್ಯಕತೆ ಇದ್ದು, ಪಕ್ಷೇತರರ ಜತೆಗೂಡಿ ಅಧಿಕಾರ ಪಡೆಯಲು ಅವಕಾಶವಿದೆ. ಆದರೆ, ಈ ಎರಡೂ ಕ್ಷೇತ್ರಗಳಲ್ಲಿ ಪ್ರತಿಪಕ್ಷ ಬಿಜೆಪಿಗೂ ಒಂದೇ ಸ್ಥಾನ ಬೇಕಾಗಿದ್ದು, ಪಕ್ಷೇತರರು ಯಾರನ್ನು ನೆಚ್ಚಿಕೊಳ್ಳುತ್ತಾರೆ ಎಂಬುದರ ಮೇಲೆ ಆಡಳಿತ ಚುಕ್ಕಾಣಿ ನಿರ್ಧಾರವಾಗುತ್ತದೆ.

ಬಿಜೆಪಿಗೆ ಸದಾವಕಾಶ: ಒಂದು ಮಹಾನಗರ ಪಾಲಿಕೆ ಸೇರಿದಂತೆ 27 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಚಿತ್ರದುರ್ಗ ನಗರಸಭೆಯಲ್ಲಿ ಒಂದು ಸ್ಥಾನ, ಚಾಮರಾಜನಗರ ನಗರಸಭೆಯಲ್ಲಿ 2 ಸ್ಥಾನಗಳ ಅವಶ್ಯಕತೆ ಇದೆ. ಮೂಡಲಗಿ, ಕಾರ್ಕಳಗಳಲ್ಲಿ
ಬಿಜೆಪಿಗೆ ಒಂದು ಸ್ಥಾನ, ಕೆರೂರಿನಲ್ಲಿ ಎರಡು ಸ್ಥಾನದ ಅಗತ್ಯವಿದ್ದು, ಇಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸದಸ್ಯರ ಅವಶ್ಯಕತೆ ಇರುವುದರಿಂದ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ ಇದೆ.

ಎಸ್‌ಡಿಪಿಐ ನಿರ್ಣಾಯಕ
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಪುರಸಭೆಯ 27 ಸ್ಥಾನಗಳ ಪೈಕಿ ಬಿಜೆಪಿ 11 ಮತ್ತು ಕಾಂಗ್ರೆಸ್‌ 12 ಸ್ಥಾನಗಳಿಸಿವೆ. ಇಲ್ಲಿ ನಾಲ್ಕು ಸ್ಥಾನ ಗಳಿಸಿರುವ ಎಸ್‌ಡಿಪಿಐ ನಿರ್ಣಾಯಕ ಪಾತ್ರ ವಹಿಸಲಿದೆ. ಆದರೆ, ಎಸ್‌ಡಿಪಿಐ ನಿಷೇಧಿಸುವಂತೆ ಒತ್ತಾಯಿಸುತ್ತಿರುವ ಬಿಜೆಪಿ ಆ ಪಕ್ಷದೊಂದಿಗೆ ಕೈಜೋಡಿಸುವ ಸಾಧ್ಯತೆ ಇಲ್ಲ. ಹೀಗಾಗಿ ಇಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಹೆಚ್ಚು.

ಹಾಸನದಲ್ಲಿ ಜೆಡಿಎಸ್‌ಗೆ ಪಕ್ಷೇತರ ಸದಸ್ಯರ ಬೆಂಬಲ ಒಟ್ಟು 35 ಸದಸ್ಯರಿರುವ ಹಾಸನ ನಗರಸಭೆಯಲ್ಲಿ 17 ಸ್ಥಾನ ಹೊಂದಿರುವ ಜೆಡಿಎಸ್‌ಗೆ ಒಂದು ಸ್ಥಾನದ ಅವಶ್ಯಕತೆ ಇದೆ. ಆದರೆ, ಅಲ್ಲಿ ಎರಡು ಸ್ಥಾನ ಹೊಂದಿರುವ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಅವಕಾಶವಿದ್ದರೂ ಅದನ್ನು ಕೈಬಿಟ್ಟು ಪಕ್ಷೇತರ ಸದಸ್ಯರನ್ನು ಸೇರಿಸಿಕೊಂಡು ಆಡಳಿತ ನಡೆಸಲು ಜೆಡಿಎಸ್‌ ಮುಂದಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಕಡಿವಾಣ ಹಾಕಲು ಸಚಿವ ಎಚ್‌.ಡಿ. ರೇವಣ್ಣ ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲೇ ಈ ಎಲ್ಲಾ ಬೆಳವಣಿಗೆ ನಡೆಯುತ್ತಿದೆ.

Advertisement

ಜಾರಕಿಹೊಳಿ ಪ್ರಭಾವ
ಗೋಕಾಕ್‌ ನಗರಸಭೆಯಲ್ಲಿ ರಮೇಶ್‌ ಜಾರಕಿಹೊಳಿ ಕಾಂಗ್ರೆಸ್‌ ಸಚಿವರಾಗಿದ್ದರೂ, ತನ್ನ ಬೆಂಬಲಿಗರನ್ನು ಪಕ್ಷೇತರರಾಗಿಯೇ ನಿಲ್ಲಿಸಿ ಗೆಲ್ಲಿಸಿಕೊಂಡಿರುವುದು ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗಳಿಗೂ ಕಾರಣವಾಗಿದೆ. ಸಚಿವ ಡಿ.ಕೆ.ಶಿವಕುಮಾರ್‌ ಬೆಳಗಾವಿ ಜಿಲ್ಲೆಯ ಆಡಳಿತದಲ್ಲಿ ಮಧ್ಯ ಪ್ರವೇಶಿಸುತ್ತಾರೆ, ಲಕ್ಷ್ಮೀ ಹೆಬ್ಟಾಳ್ಕರ್‌ ರಾಜಕೀಯವಾಗಿ ತಮ್ಮ ಕುಟುಂಬಕ್ಕೆ ಹಿನ್ನಡೆಯುಂಟು ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ಖಾನಾಪುರ ಪ.ಪಂಚಾಯಿತಿಯಲ್ಲೂ ಸ್ಥಳೀಯವಾಗಿ ಪಕ್ಷೇತರರ ಪ್ರಾಬಲ್ಯ ಹೆಚ್ಚಾಗಿದ್ದು, ಅಲ್ಲೂ ರಮೇಶ್‌ ಜಾರಕಿ ಹೊಳಿ ಪ್ರಭಾವ ಬಳಸಿ ತಮಗೆ ಬೇಕಾದವರನ್ನು ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ.

ಏನೇನು ಅವಕಾಶ?
ಕಾಂಗ್ರೆಸ್‌: ಜೆಡಿಎಸ್‌ ಜುಗಲ್‌ಬಂದಿ: ಮೈಸೂರು, ತುಮಕೂರು, ಉಳ್ಳಾಲ, ಕೊಪ್ಪಳ, ಗಂಗಾವತಿ, ಆಳಂದ, ಚನ್ನಗಿರಿ, ಟಿ.ನರಸೀಪುರ, ಎಚ್‌.ಡಿ. ಕೋಟೆ, ದೇವದುರ್ಗ, ಮಾನ್ವಿ. ಕಾಂಗ್ರೆಸ್‌-ಜೆಡಿಎಸ್‌- ಪಕ್ಷೇತರರು: ರಾಯಚೂರು, ಕಾರವಾರ, ಲಕ್ಷ್ಮೇಶ್ವರ, ಹಿರೆಕೇರೂರು, ಮುದ್ದೇಬಿಹಾಳ ಕಾಂಗ್ರೆಸ್‌-ಬಿಎಸ್‌ಪಿ: ಕೊಳ್ಳೇಗಾಲ ಕಾಂಗ್ರೆಸ್‌-ಕೆಪಿಜೆಪಿ: ರಾಣೆಬೆನ್ನೂರು ಕಾಂಗ್ರೆಸ್‌ ಮತ್ತು ಪಕ್ಷೇತರರು: ಹಾವೇರಿ, ಅಂಕೋಲಾ ಮತ್ತು ಕೊಟ್ಟೂರು
ಪಕ್ಷೇತರ ಜತೆ ಮೈತ್ರಿಗೆ ಬಿಜೆಪಿ, ಕಾಂಗ್ರೆಸ್‌ಗೆ ಅವಕಾಶ: ಸಂಕೇಶ್ವರ ಮತ್ತು ತೇರದಾಳ ಬಿಜೆಪಿ- ಪಕ್ಷೇತರರು: ಚಿತ್ರದುರ್ಗ, ಚಾಮರಾಜನಗರ, ಮೂಡಲಗಿ, ಕಾರ್ಕಳ, ಕೇರೂರು 

Advertisement

Udayavani is now on Telegram. Click here to join our channel and stay updated with the latest news.

Next