Advertisement

ಕರ್ನಾಟಕ ಮಿತ್ರ ಮಂಡಳ ಕಲ್ಯಾಣ್‌: ಕಚೇರಿ ಉದ್ಘಾಟನೆ

03:21 PM Feb 28, 2018 | |

ಮುಂಬಯಿ: ಕರ್ನಾಟಕ ಮಿತ್ರ ಮಂಡಳ ಕಲ್ಯಾಣ್‌ ಇದರ ನೂತನ ಕಚೇರಿಯು ಕಲ್ಯಾಣ್‌ ಪೂರ್ವದ ಜೈರಾಮ್‌ ಮಾಲಿ ಕಾಂಪ್ಲೆಕ್ಸ್‌ ನಲ್ಲಿ ಫೆ. 4 ರಂದು ಲೋಕಾರ್ಪಣೆಗೊಂಡಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾರಂಭದಲ್ಲಿ ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ಸಂಸ್ಥೆಯ ಗೌರವಾಧ್ಯಕ್ಷ ಶ್ರೀಧರ್‌ ಪೂಜಾರಿ ದಂಪತಿ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಲ್ಯಾಣ್‌ನ ಸಮಾಜ ಸೇವಕ ಗುರುದೇವ್‌ ಭಾಸ್ಕರ್‌ ಶೆಟ್ಟಿ ಇವರು ರಿಬ್ಬನ್‌ ಕತ್ತರಿಸಿ ನೂತನ ಕಚೇರಿಯನ್ನು ಉದ್ಘಾಟಿಸಿದರು.

ವಿಶೇಷ ಅತಿಥಿಯಾಗಿ ಆಗಮಿಸಿದ ಮೋಹನೆಯ ಬಿಜೆಪಿ ಉಪಾಧ್ಯಕ್ಷ, ದಿವಾಕರ್‌ ಕ್ಲಾಸೆಸ್‌ನ ಮಾಲಕ ದಿವಾಕರ ಸಾಲ್ಯಾನ್‌ ಇವರು ಉಪಸ್ಥಿತರಿದ್ದರು. ಸದಸ್ಯರ ಮಕ್ಕಳು ಪ್ರಾರ್ಥನೆಗೈದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಕೋಶಾಧಿಕಾರಿ ಸತೀಶ್‌ ಅಂಚನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಬಿ. ಕೋಟ್ಯಾನ್‌, ಕಾರ್ಯದರ್ಶಿ ದೇವಕಿ ಆರ್‌. ಪೂಜಾರಿ, ಕೋಶಾಧಿಕಾರಿ ಪ್ರೀತಿ ಆರ್‌. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಕೋಶಾಧಿಕಾರಿ ಪ್ರೀತಿ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ಅತಿಥಿಗಳನ್ನು ಪರಿಚಯಿಸಿದರು. ಗೌರವಾಧ್ಯಕ್ಷ ಶ್ರೀಧರ ಪೂಜಾರಿ ಮತ್ತು ಹಿರಿಯ ಸದಸ್ಯ ಆನಂದ್‌ ಪೂಜಾರಿ ಅವರು ಅತಿಥಿಗಳನ್ನು ಗೌರವಿಸಿದರು. ಕೋಶಾಧಿಕಾರಿ ಸತೀಶ್‌ ಅಂಚನ್‌ ದಾನಿಗಳ ಹೆಸರನ್ನು ವಾಚಿಸಿದರು. ದಾನಿಗಳನ್ನು ಗಣ್ಯರು ಗೌರವಿಸಿದರು.

ಮುಖ್ಯ ಅತಿಥಿ ಭಾಸ್ಕರ್‌ ಶೆಟ್ಟಿ ಇವರು ಮಾತನಾಡಿ, ಕಳೆದ ಮೂರು ದಶಕಗಳಿಂದ ಎಲೆಮರೆಯ ಕಾಯಿಯಂತೆ ಸಕರಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮಿತ್ರ ಮಂಡಳಿಯ ಸದಸ್ಯರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಮುಂದೆಯೂ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವಂತೆ ಸಲಹೆ ನೀಡಿದರು. ಸಂಘವು ದಿನೆ ದಿನೇ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪರಿಸರದ ತುಳು-ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನುಡಿದು ಶುಭಹಾರೈಸಿದರು.

Advertisement

ಇನ್ನೋರ್ವ ಅತಿಥಿ ದಿವಾಕರ ಸಾಲ್ಯಾನ್‌ ಇವರು ಮಾತನಾಡಿ, ನಮ್ಮ ಪುಣ್ಯಭೂಮಿ ಕರ್ನಾಟಕವು ಶ್ರೀಗಂಧದ ಬೀಡಾಗಿದೆ. ದೈವಾರಾಧನೆ, ನಾಗಾರಾಧನೆ ಪ್ರಾಧ್ಯನ್ಯವುಳ್ಳ ಪವಿತ್ರ ಭೂಮಿ ಇದಾಗಿದೆ. ನಾವೆಲ್ಲರು ಪುಣ್ಯಭೂಮಿ ಕರ್ನಾಟಕದ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ-ಬೆಳೆಸುವುದರೊಂದಿಗೆ ಯುವಪೀಳಿಗೆಗೆ ಈ ಬಗ್ಗೆ ಅರಿವು ಮೂಡಿಸಬೇಕು. ಸಂಘವು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದರು.

ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಬಿ. ಕೋಟ್ಯಾನ್‌ ಇವರು ಮಾತನಾಡಿ, ಮಹಿಳೆಯರು ಸಂಘದ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಬೇಕು ಎಂದು ನುಡಿದರು. ಗೌರವಾಧ್ಯಕ್ಷ ಶ್ರೀಧರ ಪೂಜಾರಿ ಮಾತನಾಡಿ, ಸಂಘದ ಸ್ಥಾಪನೆಗೆ ಶ್ರಮಿಸಿದ ಎಲ್ಲಾ ಹಿರಿಯರನ್ನು ಸ್ಮರಿಸಿ, ಸಂಘದ ಏಳ್ಗೆಗಾಗಿ ಎಲ್ಲರ ಸಹಕಾರವನ್ನು ಬಯಸಿದರು. ಕಾರ್ಯದರ್ಶಿ ದೇವಕಿ ಆರ್‌. ಪೂಜಾರಿ ಅವರು ವಂದಿಸಿದರು. ಚಿಕ್ಕಮ್ಮದೇವಿ ಮಂಡಳಿಯವರಿಂದ ಭಜನ ಕಾರ್ಯಕ್ರಮ ನಡೆಯಿತು. ಸಂಘದ ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಿತು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next