ಬೆಂಗಳೂರು: ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ಸಚಿವ ಆರ್.ರೋಷನ್ ಬೇಗ್‌ಗೆ ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೇಮಾ) ಉಲ್ಲಂಘನೆ ಅಡಿ ನೋಟಿಸ್ ಜಾರಿಗೊಳಿಸಿರುವುದಾಗಿ ತಿಳಿದು ಬಂದಿದೆ.
ರೋಷನ್ ಬೇಗ್ ಒಡೆತನದ ರುಮಾನ್ ಎಂಟರ್‌ಪ್ರೈಸಸ್ ಅರಬ್ ರಾಷ್ಟ್ರದಿಂದ ಹಣ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಸಚಿವ ರೋಷನ್ ಬೇಗ್ ಅವರಲ್ಲದೆ, ಪುತ್ರ ರುಮಾನ್‌ಬೇಗ್, ಪುತ್ರಿ ಸಬೀಹಾ ಫಾತೀಮಾ ಹಾಗೂ ಕಂಪನಿಯ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. 2008ರ ಆಗಸ್ಟ್ ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಫಜುಐರಹ್ ಸ್ಟೀಲ್ ಬೇರಲ್ಸ್‌ನಿಂದ ಶೇರು ಮೊತ್ತವಾಗಿ ಬಂದ ಸುಮಾರು 2.28 ಕೋಟಿ ರೂ. ಕುರಿತು ವಿವರಣೆ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಚಿವ ರೋಷನ್ ಬೇಗ್ ಪುತ್ರ ರುಮಾನ್ ಬೇಗ್ ನಿರ್ವಹಿಸುತ್ತಿರುವ ರುಮಾನ್ ಎಂಟರ್‌ಪ್ರೈಸಸ್ ಕಂಪನಿಗೆ ಶೇರು ಬಂಡವಾಳ ಹೂಡಿಕೆ ಉದ್ದೇಶಕ್ಕಾಗಿ ಯುಎಇ ಕಂಪೆನಿಯಿಂದ ಈ ಮೊತ್ತ ಪಾವತಿಯಾಗಿತ್ತು. ಆದರೆ, ಈ ಹಣ ಯಾವ ಉದ್ದೇಶಕ್ಕೆ ಬಳಕೆಯಾಗಿದೆ ಎಂಬುದಕ್ಕೆ ದಾಖಲೆಗಳಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೇಮಾ) ಉಲ್ಲಂಘನೆಯಾಗಿದೆ. ಹೀಗಾಗಿ ಯುಎಇ ಕಂಪೆನಿಯಿಂದ ಪಡೆದ ಹಣದ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಫೇಮಾ ಕಾಯ್ದೆಯನ್ವಯ ವಿದೇಶದಿಂದ ಹಣ ಪಡೆದರೆ ಅದನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ? ಯಾವ ರೀತಿ ಖರ್ಚು ಮಾಡಲಾಗಿದೆ ಎಂಬಿತ್ಯಾದಿ ದಾಖಲೆಗಳನ್ನು ಒದಗಿಸುವುದು ಕಡ್ಡಾಯ. ಆದರೆ, ರುಮಾನ್ ಎಂಟರ್ ಪ್ರೈಸಸ್‌ಗೆ ಯುಎಇ ಕಂಪನಿಯಿಂದ ಬಂದಿದ್ದ ಹಣ ಬಳಕೆ ಕುರಿತು ದಾಖಲೆಗಳನ್ನು ಒದಗಿಸದ ಕಾರಣ ಫೇಮಾ ಕಾಯ್ದೆ ಉಲ್ಲಂಘನೆ ಆರೋಪದಡಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ನೋಟಿಸ್ ಬಗ್ಗೆ ಮಾಹಿತಿ ಇಲ್ಲ: ಇಡಿ ನೋಟಿಸ್ ಕುರಿತಂತೆ ಪ್ರತಿಕ್ರಿಯಿಸಿರುವ ಸಚಿವ ರೋಷನ್ ಬೇಗ್, ನೋಟಿಸ್ ಜಾರಿ ಮಾಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ನನ್ನ ಆಪ್ತ ಶಾಖಾಧಿಕಾರಿ ಬಳಿ ವಿಚಾರಿಸಿದ್ದು, ಅವರಿಗೂ ಮಾಹಿತಿ ಇಲ್ಲ. ನೋಟಿಸ್ ಬಂದರೆ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.
ಈ ಮಧ್ಯೆ ರೋಷನ್ ಬೇಗ್ ಅವರು ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಇಡಿಯಿಂದ ಬಂದಿರುವ ನೋಟಿಸ್ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದಿಬಂದಿದೆ.