Advertisement

Valmiki ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರಗೆ ಎಸ್‌ಐಟಿ ಬುಲಾವ್‌

01:00 AM Jul 06, 2024 | Team Udayavani |

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದ ಸಂಬಂಧ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್‌ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ.

Advertisement

ಜು. 9ರಂದು ವಿಚಾರಣೆಗೆ ಹಾಜರಾಗುವಂತೆ ಬಿ. ನಾಗೇಂದ್ರ ಹಾಗೂ ಬಸವನಗೌಡ ದದ್ದಲ್‌ಗೆ ನೋಟಿಸ್‌ ನೀಡಿರುವುದಾಗಿ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಹಗರಣದಲ್ಲಿ ದದ್ದಲ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬ ನಗದು ರೂಪದಲ್ಲಿ ನಿಗಮಕ್ಕೆ ಸೇರಿದ ದುಡ್ಡು ಪಡೆದ ಆರೋಪ ಕೇಳಿಬಂದಿದೆ.

ಇದಲ್ಲದೆ ಮಾಜಿ ಸಚಿವ ಬಿ. ನಾಗೇಂದ್ರ ಆಪ್ತರಾದ ನೆಕ್ಕಂಟಿ ನಾಗರಾಜ್‌ ಹಾಗೂ ಅವರ ಭಾವಮೈದ ನಾಗೇಶ್ವರರಾವ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದರು. ಆರೋಪಿಗಳ ವಿಚಾರಣೆ ಹಾಗೂ ತನಿಖೆಯ ವೇಳೆ ಸಿಕ್ಕಿರುವ ಕೆಲವು ಸಾಕ್ಷ್ಯಗಳನ್ನು ಆಧರಿಸಿ ಇಬ್ಬರಿಗೂ ನೋಟಿಸ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಸೂಕ್ತ ಮಾಹಿತಿ ನೀಡದಿದ್ದರೆ ಇಬ್ಬರನ್ನೂ ಬಂಧಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಹಗರಣದಲ್ಲಿ 11 ಮಂದಿ ಬಂಧನ
ಪ್ರಕರಣ ಸಂಬಂಧ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದ್ದು, ಒಟ್ಟು 28 ಕೋಟಿ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಆರಂಭದಲ್ಲಿ 18 ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ಕಂಡುಬಂದಿತ್ತು. ತನಿಖೆಯನ್ನು ಚುರುಕು ಗೊಳಿಸುತ್ತಿದ್ದಂತೆ ಆರೋಪಿತರ ಕಂಪೆನಿಗಳ ಮೂಲಕ ನೂರಾರು ಬ್ಯಾಂಕ್‌ ಖಾತೆಗಳಿಂದ ಕೋಟ್ಯಂತರ ಹಣ ವರ್ಗಾವಣೆಯಾಗಿತ್ತು. ಆ ಸಂದರ್ಭದಲ್ಲಿ ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷರಾಗಿರುವ ಬಸವನಗೌಡ ದದ್ದಲ್‌ರ ಗಮನಕ್ಕೆ ಇಷ್ಟು ಗಂಭೀರವಾದ ವಿಚಾರ ಬಾರಲಿಲ್ಲವೇ, ಇವರ ಸಹಕಾರದಲ್ಲೇ ಹಗರಣ ನಡೆದಿದೆಯೇ ಎಂಬಿತ್ಯಾದಿ ಗೊಂದಲಗಳಿಗೆ ಎಸ್‌ಐಟಿ ಸ್ಪಷ್ಟೀಕರಣ ಕೇಳುವ ಸಾಧ್ಯತೆಗಳಿವೆ.

ತನಿಖಾ ಸಂಸ್ಥೆಯಿಂದ ವಿಚಾರಣೆಗೆ ನೋಟಿಸ್‌ ಬರುವ ಸಾಧ್ಯತೆ ಬಗ್ಗೆ “ಉದಯವಾಣಿ’ ಜೂ. 9ರಂದೇ ಸುದ್ದಿ ಪ್ರಕಟಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next