ಬೆಂಗಳೂರು: ರಾಜ್ಯದ ಮೊದಲ ಕೃಷಿ ಪಾಠಶಾಲೆ ಆರಂಭಗೊಂಡ ಜಾಗದಲ್ಲಿ ಈಗ ಸರ್ಕಾರ ಪಾನೀಯ ನಿಗಮದ ಕಟ್ಟಡ ಸ್ಥಾಪಿಸಲು ಮುಂದಾಗಿದೆ.
ಈ ಮೂಲಕ ಅಲ್ಲಿರುವ ಪಾರಂಪರಿಕ ಕಟ್ಟಡಗಳ ಪಾವಿತ್ರ್ಯತೆಗೆ ಧಕ್ಕೆ ಎದುರಾಗಿದೆ. ನೂರಾರು ವರ್ಷಗಳ ಹಿಂದಿನ ಮಾತು- ವೈಜ್ಞಾನಿಕವಾಗಿ ಕೃಷಿ ಮಾಡುವ ತಿಳಿವಳಿಕೆ ಒತ್ತಟ್ಟಿಗಿರಲಿ, ಅದರ ಪರಿಕಲ್ಪನೆಯೂ ನಮ್ಮ ರೈತರಿಗೆ ಇರಲಿಲ್ಲ. ಆಗಲೇ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ವಿದೇಶಿ ಕೃಷಿ ತಜ್ಞರ ಸಲಹೆ ಮೇರೆಗೆ 1913ರಲ್ಲಿ ನಗರದ ಹೆಬ್ಟಾಳದಲ್ಲಿ ರಾಜ್ಯದ ಮೊದಲ ಕೃಷಿ ಪಾಠಶಾಲೆಗೆ ಅನುಮತಿ ನೀಡಿದರು.
ಶತಮಾನ ಕಂಡ ಕೃಷಿ ಸಂಶೋಧನಾ ಕಟ್ಟಡಗಳು ಇದಕ್ಕೆ ಸಾಕ್ಷಿಯಾಗಿ ಈಗಲೂ ಅಲ್ಲಿವೆ. ಪಾರಂಪರಿಕ ತಾಣ ಆಗಬೇಕಾದ ಆ ಆವರಣದಲ್ಲಿ ಈಗ ಸರ್ಕಾರ ಪಾನೀಯ ನಿಗಮದ ಕಟ್ಟಡ ನಿರ್ಮಿಸಲು ಅನುಮೋದನೆ ನೀಡಿದೆ. ವಿಚಿತ್ರವೆಂದರೆ ಈ ಪಾನೀಯ ನಿಗಮವನ್ನು ಕೃಷಿ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ.
ಬೆಂಗಳೂರಿನ ಹೆಬ್ಟಾಳದ ಬಳಿ ಸರ್ವೇ ನಂಬರ್ 2ರಲ್ಲಿ ಒಟ್ಟು 256.41 ಎಕರೆ ಪೈಕಿ 2 ಎಕರೆ ಭೂಮಿ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ 43,560 ಚದರಡಿ ಅಂದರೆ ಹೆಚ್ಚು-ಕಡಿಮೆ ಒಂದು ಎಕರೆ ಜಾಗದಲ್ಲಿ ಅಂದಾಜು 56.63 ಕೋಟಿ ವೆಚ್ಚದಲ್ಲಿ ಪಾನೀಯ ನಿಗಮ ಮತ್ತು ಕೃಷಿ ಇಲಾಖೆಯ ಅವಳಿ ಗೋಪುರಗಳ ನಿರ್ಮಾಣ ಮಾಡಲು ಈಚೆಗೆ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೆಬ್ಟಾಳದಲ್ಲಿ ಸುಮಾರು 256.41 ಎಕರೆ ಜಾಗದಲ್ಲಿ ಇದುವರೆಗೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಹೀಗಾಗಿ, ಪಶುಸಂಗೋಪನೆ, ರಾಜ್ಯ ಬೀಜ ನಿಗಮ, ಹೈನೋದ್ಯಮ ಸೇರಿದಂತೆ 20ಕ್ಕೂ ಪೂರಕ ಚಟುವಟಿಕೆಗಳು ಅಲ್ಲಿ ನಡೆಯುತ್ತಿವೆ. ಆದರೆ, ಇದಕ್ಕೆ ಭಿನ್ನವಾಗಿ ಕೃಷಿಗೆ ಸಂಬಂಧವೇ ಇಲ್ಲದ ಅದರಲ್ಲೂ ಪಾನೀಯ ನಿಗಮದ ಕಚೇರಿ ಕಟ್ಟಡ ತಲೆಯೆತ್ತಲು ಅವಕಾಶ ಮಾಡಿಕೊಡಲಾಗಿದೆ.
ರಾಜ್ಯದ ಕೃಷಿ ಶಿಕ್ಷಣ ಕೇಂದ್ರವಾಗಿತ್ತು ಹೆಬ್ಬಾಳ: ಇದೇ ಹೆಬ್ಟಾಳ ಕೃಷಿ ಶಿಕ್ಷಣದ ಕೇಂದ್ರವಾಗಿತ್ತು. ಜರ್ಮನ್‌ನ ಕೃಷಿ ರಸಾಯನಶಾಸ್ತ್ರಜ್ಞ ಡಾ.ಲೆಹಮನ್ ಇಲ್ಲಿ ಕೃಷಿ ಪ್ರಯೋಗಾಲಯ ಮತ್ತು ಪ್ರಾತ್ಯಕ್ಷಿಕೆಗಳನ್ನು ಮಾಡಿದ್ದರು. ಮೊದಲ ಮಿಶ್ರತಳಿ ಕುರಿಗಳ ಪ್ರದರ್ಶನದ ಮೂಲಕ ಕೃಷಿ ಮೇಳ ನಡೆದಿದ್ದು ಇದೇ ಜಾಗದಲ್ಲಿ. ನಂತರ ಡಾ.ಲೆಸ್ಸಿ ಕೋಲ್‌ವುನ್ ಕೃಷಿ ಪಾಠಶಾಲೆಯ ಪರಿಕಲ್ಪನೆಯನ್ನು ಮಹಾರಾಜರ ಮುಂದಿಡುತ್ತಾರೆ. ಅವರ ಮಾರ್ಗದರ್ಶನದಲ್ಲೇ ಮುಂದೆ 1913ರಲ್ಲಿ ಕೃಷಿ ಶಾಲೆ ಅಸ್ತಿತ್ವಕ್ಕೆ ಬರುತ್ತದೆ. ಅದರ ಪ್ರಾಂಶುಪಾಲರೂ ಸ್ವತಃ ಡಾ.ಕೋಲ್‌ವುನ್ ಆಗುತ್ತಾರೆ. ಮೊದಲಿಗೆ ಇಲ್ಲಿ 2 ವರ್ಷಗಳ ಕೃಷಿಯಲ್ಲಿ ಪೋಸ್ಟ್ ಸೆಕೆಂಡರಿ ಸರ್ಟಿಫಿಕೇಟ್ ಟ್ರೈನಿಂಗ್ ಕೋರ್ಸ್ ಆರಂಭಿಸಲಾಯಿತು.
ನಂತರದಲ್ಲಿ ಅದನ್ನು 3 ವರ್ಷಗಳ ಕೃಷಿ ಡಿಪ್ಲೊಮಾ ಕೋರ್ಸ್ ಆಗಿ ಪರಿವರ್ತಿಸಲಾಯಿತು. ಮುಂದೆ ಇದು ಕೃಷಿ ಕಾಲೇಜು ಆಗಿ ಮೇಲ್ದರ್ಜೆ ಗೇರಿತು. ಮೊದಲೇ ಇದ್ದ ಕಟ್ಟಡಗಳಲ್ಲೇ 1946ರಲ್ಲಿ 3 ವರ್ಷಗಳ ಕೃಷಿ ಪದವಿ ಕೋರ್ಸ್ ಅನ್ನು ಪರಿಚಯಿ ಸಲಾಯಿತು. ನಂತರದ ದಿನಗಳಲ್ಲಿ ಪ್ರಸ್ತುತ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೇರಿದಂತೆ ಅನೇಕರು ಇದೇ ಹೆಬ್ಟಾಳ ಕ್ಯಾಂಪಸ್‌ನಲ್ಲಿ ಕೃಷಿ ಪದವಿ ಪೂರೈಸಿದರು. 1913ರಲ್ಲಿ ಆರಂಭಗೊಂಡ ಕೃಷಿ ಶಾಲೆಯ ಶತಮಾನೋತ್ಸವ ದಶಕದ ಹಿಂದಷ್ಟೇ ನಡೆಯಿತು. ಇಂದು ಆ ಕಟ್ಟಡಗಳೇ ಮುಖ್ಯ ಸಂಶೋಧನಾ ಕೇಂದ್ರ ಎಂದೇ ಪರಿಚಿತವಾಗಿವೆ. ಈ ಜಾಗವನ್ನು ಪಾರಂಪರಿಕ ತಾಣವಾಗಿ ಘೋಷಿಸುವ ಮೂಲಕ ರಕ್ಷಣೆ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಈ ನಡುವೆಯೇ ಇದಕ್ಕೆ ಹೊಂದಿಕೊಂಡ ಜಾಗದಲ್ಲಿ ಪಾನೀಯ ನಿಗಮ ಸ್ಥಾಪನೆಗೆ ಅನುಮೋದನೆ ದೊರಕಿದೆ.
–ವಿಜಯಕುಮಾರ ಚಂದರಗಿ