Advertisement

ಪರಿಷತ್‌ ವಿಪಕ್ಷ‌ ನಾಯಕ ಸ್ಥಾನಕ್ಕೆ ಪೈಪೋಟಿ

11:37 PM Jan 08, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನಪರಿಷತ್‌ ವಿಪಕ್ಷ ನಾಯಕನ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ಪೈಪೋಟಿ ಶುರುವಾಗಿದ್ದು, ಘಟಾನುಘಟಿಗಳು ಸ್ಪರ್ಧೆಯಲ್ಲಿದ್ದಾರೆ. ಈ ಹುದ್ದೆಗೆ ಮಾನದಂಡ ಪಕ್ಷ ನಿಷ್ಠೆಯಾ ಅಥವಾ ವಿವಾದಾತ್ಮಕ ವ್ಯಕ್ತಿತ್ವವಾ ಎಂಬ ವಿಷಯ ಹೈಕಮಾಂಡ್‌ ಅಂಗಳ ತಲುಪಿದೆ.

Advertisement

ಈ ಹುದ್ದೆಯಲ್ಲಿ ತಮ್ಮವರನ್ನು ಪ್ರತಿಷ್ಠಾಪಿಸಲು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ “ರಂಗಪ್ರವೇಶ’ ಮಾಡಿದ್ದಾರೆ.
ಬಿ.ಕೆ.ಹರಿಪ್ರಸಾದ್‌, ನಸೀರ್‌ ಅಹಮದ್‌, ಸಿ.ಎಂ.ಇಬ್ರಾಹಿಂ, ಅಲ್ಲಂ ವೀರಭದ್ರಪ್ಪ, ಸಲೀಂ ಅಹಮದ್‌ ವಿಪಕ್ಷ ನಾಯಕ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಿ.ಕೆ.ಹರಿಪ್ರಸಾದ್‌ ಪರ ಡಿ.ಕೆ.ಶಿವಕುಮಾರ್‌, ನಸೀರ್‌ ಅಹಮದ್‌ ಪರ ಮಲ್ಲಿಕಾರ್ಜುನ ಖರ್ಗೆ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

ಈ ಮಧ್ಯೆ, ವಿಪಕ್ಷ ನಾಯಕ ಆಗಲೇ ಬೇಕೆಂದು ಹಠಕ್ಕೆ ಬಿದ್ದಿರುವ ಸಿ.ಎಂ.ಇಬ್ರಾಹಿಂ ವಿಚಾರದಲ್ಲಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ. ಜೆಡಿಎಸ್‌ ನಾಯಕರ ಜತೆ ನಂಟು ಹೊಂದಿರುವ ಹಾಗೂ ಆಗಾಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಮುಜುಗರ ಉಂಟು ಮಾಡುವ ಅವರ ಹೆಸರು ಶಿಫಾರಸು ಮಾಡಿ ಮುಂದೆ ಏನಾದರೂ ಸಮಸ್ಯೆಯಾದರೆ ಎಂಬ ಆತಂಕ ಅವರದು ಎನ್ನಲಾಗಿದೆ.

ಹೈಕಮಾಂಡ್‌ನ‌ತ್ತ ಚಿತ್ತ
ಪರಿಷತ್‌ ವಿಪಕ್ಷ ಸ್ಥಾನಕ್ಕಾಗಿ ಹಿಂದುಳಿದ ವರ್ಗ, ಮುಸ್ಲಿಂ ಹಾಗೂ ಲಿಂಗಾಯಿತ ಸಮುದಾಯ ತಮ್ಮದೇ ಆದ ರೀತಿಯಲ್ಲಿ ಲಾಬಿ ನಡೆಸುತ್ತಿದೆ. ಲಿಂಗಾಯಿತ ಸಮುದಾಯದ ಆಲ್ಲಂ ವೀರಭದ್ರಪ್ಪ ಅವರಿಗೆ ವಯಸ್ಸು ಅಡ್ಡಿಯಾಗುತ್ತಿದೆ ಎನ್ನಲಾಗಿದೆ. ಹೀಗಾಗಿ, ಹಿಂದುಳಿದ ಅಥವಾ ಮುಸ್ಲಿಂ ಸಮುದಾಯಕ್ಕೆ ಪಕ್ಷನಿಷ್ಠೆ ಹಾಗೂ ಹಿರಿತನ ಆಧರಿಸಿ ಅವಕಾಶ ಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಈ ನಡುವೆ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು. ಅವಕಾಶ ಇದ್ದಾಗ ಕೊಟ್ಟರೆ ಸಂದೇಶ ರವಾನೆಯಾದಂತಾಗುತ್ತದೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪಟ್ಟು ಹಿಡಿದಿದ್ದಾರೆ. ಮುಸ್ಲಿಂ ವಿಚಾರದಲ್ಲಿ ಅವರ ಒಲವು ನಸೀರ್‌ ಅಹಮದ್‌ ಪರ ಇದೆ . ಜತೆಗೆ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಸಹ ನಸೀರ್‌ ಅಹಮದ್‌ ವಿಚಾರದಲ್ಲಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

Advertisement

ವಿಧಾನಸಭೆಯಲ್ಲಿ ಹಿಂದುಳಿದ ವರ್ಗದ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿರುವುದರಿಂದ ಅಲ್ಲಿಯೂ ಅದೇ ವರ್ಗಕ್ಕೆ ಬೇಡ ಎಂಬುದು ಕೆಲವರ ಪ್ರತಿಪಾದನೆ. ಆದರೆ, ಬಿ.ಕೆ.ಹರಿಪ್ರಸಾದ್‌ ಪರ ಡಿ.ಕೆ.ಶಿವಕುಮಾರ್‌ ನಿಂತಿದ್ದಾರೆ. ಇಬ್ರಾಹಿಂ ತನ್ನದೇ ಆದ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಜೆಡಿಎಸ್‌ ಜತೆಗಿನ ನಂಟು, ಉಪ ಚುನಾವಣೆಗಳಲ್ಲಿ ಪಕ್ಷದ ಪರ ಕೆಲಸ ಮಾಡದಿರುವುದು ಸೇರಿ ನಕಾರಾತ್ಮಕ ಅಂಶಗಳ ಬಗ್ಗೆ ವರಿಷ್ಠರಿಗೆ ವರದಿ ಸಹ ಹೋಗಿದೆ ಎಂಬ ಮಾತುಗಳಿವೆ.

ಇದನ್ನೂ ಓದಿ:ಇನ್‌ಸ್ಟಾಗ್ರಾಂನಲ್ಲಿ ವಿರಾಟ್‌, ಪ್ರಿಯಾಂಕಾಗೆ ಕೋಟಿ ಬೆಲೆ!

ಲೆಕ್ಕಾಚಾರ
ಪರಿಷತ್‌ ವಿಪಕ್ಷ ನಾಯಕರಾಗಿದ್ದ ಎಸ್‌.ಆರ್‌.ಪಾಟೀಲ್‌ ಅವರಿಗೆ ಮತ್ತೂಮ್ಮೆ ಸ್ಪರ್ಧಿಸಲು ಅವಕಾಶ ಸಿಗದ ಕಾರಣ ಜ.5ಕ್ಕೆ ಅವರ ಅವಧಿ ಮುಗಿದಿದೆ. ಹೀಗಾಗಿ, ಮುಂದಿನ ಜಂಟಿ ಅಧಿವೇಶನದ ಒಳಗೆ ವಿಪಕ್ಷ ನಾಯಕನ ನೇಮಕವಾಗಬೇಕಾಗಿದೆ. ಈಗಾಗಲೇ ಎರಡು ಸುತ್ತಿನ ಚರ್ಚೆಯೂ ನಡೆದಿದ್ದು, ಮೇಕೆದಾಟು ಪಾದಯಾತ್ರೆ ಮುಗಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಪ್ಲಸ್‌ ಆ್ಯಂಡ್‌ ಮೈನಸ್‌
ಬಿ.ಕೆ.ಹರಿಪ್ರಸಾದ್‌
ರಾಜ್ಯಸಭೆ ಸದಸ್ಯರಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಹಿತ ವಿವಿಧ ರಾಜ್ಯಗಳ ಉಸ್ತುವಾರಿಯಾಗಿ ಕೆಲಸ ಮಾಡಿರುವ ಅನುಭವ, ಪಕ್ಷ ನಿಷ್ಠೆ ಪ್ಲಸ್‌ ಪಾಯಿಂಟ್‌. ಹಿಂದುಳಿದ ವರ್ಗಕ್ಕೆ ಉಭಯ ಸದನಗಳಲ್ಲಿ ವಿಪಕ್ಷ ಸ್ಥಾನ ಕೊಟ್ಟರೆ ಬೇರೆ ಸಮುದಾಯ ಕೋಪಗೊಳ್ಳುವ ಆತಂಕ ಮೈನಸ್‌ ಪಾಯಿಂಟ್‌.

ನಸೀರ್‌ ಅಹಮದ್‌
4 ಬಾರಿ ಪರಿಷತ್‌ ಸದಸ್ಯ, ಒಮ್ಮೆ ವಿಧಾನಸಭೆ ಸದಸ್ಯ, ಮಾಜಿ ಸಚಿವ. 20 ವರ್ಷದ ಅನುಭವ, ಎನ್‌ಎಸ್‌ಯುಐ, ಯುವ ಕಾಂಗ್ರೆಸ್‌, ಕೆಪಿಸಿಸಿಯಲ್ಲಿ ಪಕ್ಷದ ಹಲವು ಹುದ್ದೆ ನಿಭಾಯಿಸಿರುವುದು. ಪಕ್ಷ ನಿಷ್ಠೆ ಪ್ಲಸ್‌ ಪಾಯಿಂಟ್‌. ಮುನ್ನುಗ್ಗುವುದಿಲ್ಲ ಎಂಬುದು ಮೈನಸ್‌ ಪಾಯಿಂಟ್‌

ಸಿ.ಎಂ.ಇಬ್ರಾಹಿಂ
ಕೇಂದ್ರದ ಸಚಿವರಾಗಿ ರಾಜ್ಯದಲ್ಲೂ ಹಲವು ಜವಾಬ್ದಾರಿ ನಿಭಾಯಿಸಿದ ಅನುಭವ. ಉತ್ತಮ ಭಾಷಣಕಾರ ಎಂಬುದು ಪ್ಲಸ್‌ ಪಾಯಿಂಟ್‌. ವಿವಾದಾತ್ಮಕ ಹೇಳಿಕೆ, ಜೆಡಿಎಸ್‌ ಜತೆಗಿನ ನಂಟು ಹಾಗೂ ಪಕ್ಷಕ್ಕೆ ನಿಷ್ಠೆ ಇಲ್ಲದಿರುವುದು ಮೈನಸ್‌ ಪಾಯಿಂಟ್‌.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next