Advertisement

ನಾಯರ್‌ ನೆರವಿನಿಂದ ಮುನ್ನಡೆದ ಕರ್ನಾಟಕ

09:33 AM Dec 19, 2017 | |

ಕೋಲ್ಕತಾ: ತೀರಾ ಎಚ್ಚರಿಕೆ ಹಾಗೂ ಜವಾಬ್ದಾರಿಯುತ ಬ್ಯಾಟಿಂಗ್‌ ಮೂಲಕ ದ್ವಿತೀಯ ದಿನವಿಡೀ ಕ್ರೀಸ್‌ ಆಕ್ರಮಿಸಿಕೊಂಡ ಕರುಣ್‌ ನಾಯರ್‌, ರಣಜಿ ಸೆಮಿಫೈನಲ್‌ನಲ್ಲಿ ಕರ್ನಾಟಕಕ್ಕೆ ಅಗತ್ಯವಿದ್ದ ಮುನ್ನಡೆಯನ್ನು ತಂದಿತ್ತಿದ್ದಾರೆ. 

Advertisement

ವಿದರ್ಭದ 185 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ 3 ವಿಕೆಟಿಗೆ 36 ರನ್‌ ಮಾಡಿ ಸಂಕಟದಲ್ಲಿದ್ದ ಕರ್ನಾಟಕ, ಸೋಮವಾರದ ಆಟದ ಮುಕ್ತಾಯಕ್ಕೆ 8 ವಿಕೆಟ್‌ ಕಳೆದುಕೊಂಡು 294 ರನ್‌ ಪೇರಿಸಿದೆ. ಇದರಲ್ಲಿ ಕರುಣ್‌ ನಾಯರ್‌ ಪಾಲು ಅಜೇಯ 148 ರನ್‌. ಸದ್ಯದ ಮುನ್ನಡೆ 109 ರನ್‌.

ಫೈನಲ್‌ ಪ್ರವೇಶದ ಒಂದು ಮಾನದಂಡ ವಾದ “ಇನ್ನಿಂಗ್ಸ್‌ ಲೀಡ್‌’ ಈಗಾಗಲೇ ಒಲಿದಿರುವುದರಿಂದ ಕರ್ನಾಟಕ ಹೆಚ್ಚು ನಿರಾಳವಾಗಿದೆ ಎನ್ನಲಡ್ಡಿಯಿಲ್ಲ. ಆದರೆ ಈಡನ್‌ ಅಂಗಳ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿರುವುದರಿಂದ ಹಾಗೂ ಪಂದ್ಯ ಇನ್ನೂ 3 ದಿನ ಸಾಗಲಿಕ್ಕಿರುವುದರಿಂದ ಸ್ಪಷ್ಟ ಫ‌ಲಿತಾಂಶ ಕಾಣುವುದರಲ್ಲಿ ಅನುಮಾನವಿಲ್ಲ. ಸದ್ಯ ಕರ್ನಾಟಕ ಮೇಲುಗೈ ಸಾಧಿಸಿದೆ. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲೂ ವಿದರ್ಭದ ವಿಕೆಟ್‌ಗಳನ್ನು ಬೇಗನೇ ಉರುಳಿಸುವುದು ಮುಖ್ಯ.

ಆಪತಾºಂಧವ ನಾಯರ್‌
21 ರನ್ನಿಗೆ ಕರ್ನಾಟಕದ 3 ವಿಕೆಟ್‌ ಉಡಾಯಿಸಿದ ವಿದರ್ಭ, ದ್ವಿತೀಯ ದಿನವೂ ಭೀತಿ ಒಡ್ಡುವ ಸಾಧ್ಯತೆ ಇತ್ತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ರಾಜ್ಯದ ಪಾಲಿಗೆ ಆಪತಾºಂಧವರಾಗಿ ಮೂಡಿಬಂದರು. ಬೌಲರ್‌ಗಳ ಸ್ವರ್ಗವಾಗಿದ್ದ ಅಂಗಳದಲ್ಲಿ ಕೆಚ್ಚೆದೆಯಿಂದ ಆಡಿ ಕರ್ನಾಟಕವನ್ನು ಮೇಲೆತ್ತಿದರು. 

6 ರನ್‌ ಮಾಡಿ ಆಡುತ್ತಿದ್ದ ನಾಯರ್‌ ವಿದರ್ಭ ದಾಳಿಗೆ ಸ್ವಲ್ಪವೂ ವಿಚಲಿತರಾಗದೆ ಸೋಮವಾರವಿಡೀ ಕ್ರೀಸಿಗೆ ಅಂಟಿಕೊಂಡು ನಿಂತು 148ರ ತನಕ ಸಾಗಿದರು. ಇವರಿಗೆ ಸಿ.ಎಂ. ಗೌತಮ್‌ ಮತ್ತು ನಾಯಕ ವಿನಯ್‌ ಕುಮಾರ್‌ ಅವರಿಂದ ಉತ್ತಮ ಬೆಂಬಲ ಲಭಿಸಿತು. ಗೌತಮ್‌ 73 ರನ್‌ ಹೊಡೆದರೆ, ವಿನಯ್‌ 20 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

ಪ್ರಥಮ ದರ್ಜೆಯಲ್ಲಿ 13ನೇ ಶತಕ
ಟೆಸ್ಟ್‌ ಕ್ರಿಕೆಟಿನ ತ್ರಿಶತಕ ವೀರನೆಂಬ ಖ್ಯಾತಿಯ ನಾಯರ್‌ ಈಗಾಗಲೇ 261 ಎಸೆತಗಳನ್ನು ನಿಭಾಯಿಸಿದ್ದು, 20 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದ್ದಾರೆ. ಇದು 57ನೇ ಪ್ರಥಮ ದರ್ಜೆ ಪಂದ್ಯದಲ್ಲಿ ನಾಯರ್‌ ದಾಖಲಿಸಿದ 13ನೇ ಶತಕ. ಪ್ರಸಕ್ತ ರಣಜಿ ಋತುವಿನಲ್ಲಿ ಮೂರನೆಯದು. ಇದಕ್ಕೂ ಮುನ್ನ ಹೈದರಾಬಾದ್‌ ವಿರುದ್ಧ ಶಿವಮೊಗ್ಗದಲ್ಲಿ 134 ಹಾಗೂ ಮಹಾರಾಷ್ಟ್ರ ವಿರುದ್ಧ ಪುಣೆಯಲ್ಲಿ 116 ರನ್‌ ಹೊಡೆದಿದ್ದರು. 

ನಾಯರ್‌-ಗೌತಮ್‌ ಸೇರಿಕೊಂಡು ಮೊದಲ ಅವಧಿಯನ್ನು ತಮ್ಮ ಬ್ಯಾಟಿಂಗಿಗೆ ಬಳಸಿಕೊಂಡು 4ನೇ ವಿಕೆಟಿಗೆ 139 ರನ್‌ ಪೇರಿಸಿದರು. ಇದರಲ್ಲಿ ಗೌತಮ್‌ ಗಳಿಕೆ 73 ರನ್‌. ಇನ್ನೇನು ಭೋಜನ ವಿರಾಮಕ್ಕೆ ಹೊರಡಬೇಕೆನ್ನುವಾಗ ಉಮೇಶ್‌ ಯಾದವ್‌ ಈ ಜೋಡಿಯನ್ನು ಬೇರ್ಪಡಿಸಿದರು; ಗೌತಮ್‌ ಅವರ ವಿಕೆಟ್‌ ಹಾರಿಸಿದರು. ಅವರ 125 ಎಸೆತಗಳ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಸೇರಿತ್ತು.

ನೆರವಿಗೆ ಬಂದ ವಿನಯ್‌
ದ್ವಿತೀಯ ಅವಧಿಯ ಆಟದಲ್ಲಿ ಕರ್ನಾಟಕ ಕ್ಷಿಪ್ರ ಕುಸಿತವೊಂದನ್ನು ಕಂಡಿತು. ಮಧ್ಯಮ ವೇಗಿ ರಜನೀಶ್‌ ಗುರ್ಬಾನಿ ಆತಂಕ ತಂದೊಡ್ಡಿದರು. ಅವರು ಆಲ್‌ರೌಂಡರ್‌ಗಳಾದ ಸ್ಟುವರ್ಟ್‌ ಬಿನ್ನಿ (4), ಶ್ರೇಯಸ್‌ ಗೋಪಾಲ್‌ (7) ಮತ್ತು ಕೆ. ಗೌತಮ್‌ (1) ವಿಕೆಟ್‌ಗಳನ್ನು ಬೆನ್ನು ಬೆನ್ನಿಗೆ ಉಡಾಯಿಸಿದರು. 198 ರನ್ನಿಗೆ ಕರ್ನಾಟಕದ 7 ವಿಕೆಟ್‌ ಬಿತ್ತು. ಗುರ್ಬಾನಿ ಸಾಧನೆ 90ಕ್ಕೆ 5 ವಿಕೆಟ್‌.

ಸ್ಕೋರ್‌ 225ಕ್ಕೆ ಏರಿದಾಗ ಮಿಥುನ್‌ (10) ಕೂಡ ಔಟಾದರು. ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಹೋರಾಡುತ್ತಿದ್ದ ನಾಯರ್‌ಗೆ ಬೆಂಬಲ ಕೊಡುವವರು ಯಾರು ಎಂಬ ಚಿಂತೆ ಬಿಗಡಾಯಿಸತೊಡಗಿತು. ವಿನಯ್‌ ಕುಮಾರ್‌ ಕಪ್ತಾನನ ಆಟದ ಮೂಲಕ ಈ ಚಿಂತೆಯನ್ನು ದೂರ ಮಾಡಿದ್ದಾರೆ. ವಿನಯ್‌ 20 ರನ್ನಿಗೆ 74 ಎಸೆತ ಎದುರಿಸಿದ್ದು, 3 ಬೌಂಡರಿ ಹೊಡೆದಿದ್ದಾರೆ.

ಸ್ಕೋರ್‌ಪಟ್ಟಿ
ವಿದರ್ಭ ಪ್ರಥಮ ಇನ್ನಿಂಗ್ಸ್‌    184

ಕರ್ನಾಟಕ ಪ್ರಥಮ ಇನ್ನಿಂಗ್ಸ್‌
ಆರ್‌. ಸಮರ್ಥ್    ಸಿ ವಾಡ್ಕರ್‌ ಬಿ ಗುರ್ಬಾನಿ    6
ಮಾಯಾಂಕ್‌ ಅಗರ್ವಾಲ್‌    ಎಲ್‌ಬಿಡಬು ಯಾದವ್‌    15
ಡಿ. ನಿಶ್ಚಲ್‌    ಬಿ ಗುರ್ಬಾನಿ    0
ಕರುಣ್‌ ನಾಯರ್‌    ಬ್ಯಾಟಿಂಗ್‌    148
ಸಿ.ಎಂ. ಗೌತಮ್‌    ಸಿ ವಖಾರೆ ಬಿ ಯಾದವ್‌    73
ಸ್ಟುವರ್ಟ್‌ ಬಿನ್ನಿ    ಸಿ ವಾಂಖೇಡೆ ಬಿ ಗುರ್ಬಾನಿ    4
ಶ್ರೇಯಸ್‌ ಗೋಪಾಲ್‌    ಸಿ ಫ‌ಜಲ್‌ ಬಿ ಗುರ್ಬಾನಿ    7
ಕೆ. ಗೌತಮ್‌    ಸಿ ವಾಂಖೇಡೆ ಬಿ ಗುರ್ಬಾನಿ    1
ಅಭಿಮನ್ಯು ಮಿಥುನ್‌    ಬಿ ಸರ್ವಟೆ    10
ವಿನಯ್‌ ಕುಮಾರ್‌    ಬ್ಯಾಟಿಂಗ್‌    20

ಇತರ        10
ಒಟ್ಟು  (8 ವಿಕೆಟಿಗೆ)        294
ವಿಕೆಟ್‌ ಪತನ: 1-17, 2-21, 3-21, 4-160, 5-174, 6-192, 7-198, 8-225.

ಬೌಲಿಂಗ್‌:
ಉಮೇಶ್‌ ಯಾದವ್‌    26-3-71-2
ರಜನೀಶ್‌ ಗುರ್ಬಾನಿ        30-5-90-5
ಸಿದ್ದೇಶ್‌ ನೆರಾಲ್‌        19-1-78-0
ಫೈಜ್‌ ಫ‌ಜಲ್‌        2-0-6-0
ಆದಿತ್ಯ ಸರ್ವಟೆ        11-2-35-1
ಅಕ್ಷಯ್‌ ವಖಾರೆ        5-1-7-0

Advertisement

Udayavani is now on Telegram. Click here to join our channel and stay updated with the latest news.

Next