Advertisement

ಕೆ.ಬಿ. ಕೋಳಿವಾಡ, ರಾಜಣ್ಣಗೆ ನೋಟಿಸ್‌ ಜಾರಿ

06:10 AM Jul 24, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಹಾಗೂ ಪಕ್ಷದ ನಾಯಕರ ವಿರುದಟಛಿ ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆ ನೀಡಿರುವ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಹಾಗೂ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಅವರಿಗೆ ಕೆಪಿಸಿಸಿಯಿಂದ ಕಾರಣ ಕೇಳಿ ನೊಟೀಸ್‌ ನೀಡಲಾಗಿದೆ.

Advertisement

ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ ಘೋರ್ಪಡೆ ನೋಟಿಸ್‌ ಜಾರಿ ಮಾಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕಿರುವುದಕ್ಕೆ ಕಾಂಗ್ರೆಸ್‌ ನಾಯಕರೇ ಕಾರಣ ಎಂದು ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಹೇಳಿಕೆಯಿಂದ ಪಕ್ಷದ ಘನತೆಗೆ ಕುಂದುಂಟಾಗಿದ್ದು, ಈ ರೀತಿಯ ನಡವಳಿಕೆ ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು ಗಂಭೀರವಾಗಿ ಪರಿಗಣಿಸಲಾಗುತ್ತದೆ. ವಾರದಲ್ಲಿ ಸೂಕ್ತ ಕಾರಣ ನೀಡದಿದ್ದರೆ ಶಿಸ್ತು ಕೈಗೊಳ್ಳುವುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಅದೇ ರೀತಿ, ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಅವರಿಗೆ, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡು ತುಮಕೂರು ಕ್ಷೇತ್ರ ಬಿಟ್ಟುಕೊಟ್ಟರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗಿದೆ.

ಪಕ್ಷ ನೀಡಿರುವ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ಕೆ.ಬಿ. ಕೋಳಿವಾಡ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು ನೋಟಿಸ್‌ ತಲುಪಿದ ನಂತರ ಪಕ್ಷದ ನಾಯಕರಿಗೆ ಉತ್ತರ ಕೊಡುತ್ತೇನೆ. ಪಕ್ಷಕ್ಕೆ ವ್ಯಕ್ತಿಯಿಂದ ಮುಜುಗರವಾದಾಗ ಅದನ್ನು ವಿರೋಧಿಸಿ ಹೇಳಿದ್ದೇನೆ. ಸಮನ್ವಯ ಸಮಿತಿಯಲ್ಲಿ ಚರ್ಚಿಸುವ ವಿಷಯವನ್ನು ಬಹಿರಂಗವಾಗಿ ಹೇಳಿರುವುದು ತಪ್ಪು ಎಂದು ಹೇಳಿದ್ದೇನೆ ಎಂದರು.

ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಬೇಕೆಂದು ಹೈಕಮಾಂಡ್‌ ನಿರ್ಧಾರ ಮಾಡಿದೆ. ಅದಕ್ಕಾಗಿಯೇ ಸಮನ್ವಯ ಸಮಿತಿ ರಚನೆ ಮಾಡಿದೆ. ಸಮನ್ವಯ ಸಮಿತಿಯಲ್ಲಿದ್ದವರೇ ಬಹಿರಂಗವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಪಕ್ಷದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಪಕ್ಷದ ಬಗ್ಗೆ ಮಾತನಾಡುವಂತಿಲ್ಲ. ಅಂತವರ ವಿರುದ್ಧ ನಾನೇ ಹೋರಾಟ ಮಾಡುತ್ತೇನೆಂದು ಪರೋಕ್ಷವಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

Advertisement

ಚುನಾವಣಾ ಮೈತ್ರಿ ವಿಚಾರವನ್ನು ಹೈಕಮಾಂಡ್‌ ನಿರ್ಧಾರ ಮಾಡುವುದರಿಂದ ಮಂಡ್ಯ, ಹಾಸನ ಕ್ಷೇತ್ರ ಹಂಚಿಕೆ ಪ್ರಶ್ನೆಯೇ ಬರುವುದಿಲ್ಲ. ಮಗು ಹುಟ್ಟುವ ಮೊದಲೇ ಡಿಎನ್‌ಎ ಪರೀಕ್ಷೆ ನಿಷೇಧವಿದೆ. ಹಾಗೆಯೇ ಲೋಕಸಭೆ ಚುನಾವಣೆ ಇನ್ನೂ
ದೂರವಿದೆ. ಮೈತ್ರಿ ಮಾಡಿಕೊಳ್ಳುವುದನ್ನು ಹೈಕಮಾಂಡ್‌ ನಿರ್ಧಾರ ಮಾಡಲಿದೆ.

– ಎ. ಮಂಜು, ಮಾಜಿ ಸಚಿವ

ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಿ ಎಂದು ಕೇಳುವುದು ನಮ್ಮ ಹಕ್ಕು. ಕಳೆದ ಬಾರಿ ಎ. ಮಂಜು 50 ಸಾವಿರ ಮತಗಳಿಂದ ಸೋತಿದ್ದಾರೆ. ಮೈತ್ರಿ ಸರ್ಕಾರ ಸರಿಯಾಗಿ ನಡೆಯುತ್ತಿದೆ. ಆದರೆ, ಕಾರ್ಯಕರ್ತರನ್ನು ಕಡೆಗಣಿಸುವುದು ನಡೆಯುತ್ತಿದೆ. ಈ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ.
– ಜಾವಗಲ್‌ ಮಂಜುನಾಥ, ಹಾಸನ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next