Advertisement

ಕೊಡುಗೆಗಳ ನಿರೀಕ್ಷೆಯಲ್ಲಿ ಕರ್ನಾಟಕ

09:15 AM May 31, 2019 | Vishnu Das |

ಕೇಂದ್ರದಲ್ಲಿ ಎರಡನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ಕರ್ನಾಟಕವೂ 25 ಸಂಸದರ ಮೂಲಕ ನರೇಂದ್ರಮೋದಿ ಅವರ ಕೈ ಬಲಪಡಿಸಿರುವುದರಿಂದ ಸಹಜವಾಗಿ ರಾಜ್ಯಕ್ಕೆ “ಬಂಪರ್‌’ ಕೊಡುಗೆಗಳ ನಿರೀಕ್ಷೆಯಿದೆ. ಬಹುನಿರೀಕ್ಷಿತ ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆ ಉದ್ದೇಶದ 20 ಸಾವಿರ ಕೋಟಿ ರೂ. ಮೌಲ್ಯದ ಸಬ್‌ ಅರ್ಬನ್‌ ರೈಲು ಯೋಜನೆ ಅನುಷ್ಟಾನಕ್ಕೆ ಕೇಂದ್ರ ರೈಲ್ವೆ ಇಲಾಖೆಯಿಂದ ವೇಗ ದೊರೆಯಬೇಕಾಗಿದೆ. ಕಳೆದ ಸರ್ಕಾರದಲ್ಲಿ ಈ ನಿಟ್ಟಿನಲ್ಲಿ ಒಂದಷ್ಟು ಸಿದ್ಧತೆ ನಡೆಸಿ ಕ್ರಿಯಾ ಯೋಜನೆ ಸಹಿತ ಒಂದು ಹಂತಕ್ಕೆ ಬಂದಿದ್ದು ಇದೀಗ ಪ್ರಮುಖ ಘಟ್ಟವಾದ ಅನುಷ್ಟಾನಕ್ಕೆ ಆರ್ಥಿಕ ನೆರವು ಸಹಿತ ಎಲ್ಲ ರೀತಿಯ ಸಹಕಾರ ಬೇಕಾಗಿದೆ.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 16 ರೈಲು ಯೋಜನೆಗಳು ರಾಜ್ಯದಲ್ಲಿ ಜಾರಿಯಲ್ಲಿವೆ. ಆ ಪೈಕಿ ಕೆಲವು ಯೋಜನೆಗಳು ಅನುಷ್ಟಾನ ಹಂತದಲ್ಲಿವೆ. ಉಳಿದಂತೆ ತುಮಕೂರು-ದಾವಣಗೆರೆ, ಬಾಗಲಕೋಟೆ- ಕುಡಚಿ, ಗದಗ-ವಾಡಿ ಸೇರಿ ಕೆಲವು ಮಾರ್ಗಗಳಲ್ಲಿ ಭೂ ಸ್ವಾಧೀನ ಹಾಗೂ ಇತರೆ ಪ್ರಕ್ರಿಯೆಗಳಿಗೆ ಕೆಲವು ಅಡ್ಡಿ ಎದುರಾಗಿವೆ. ಇದನ್ನು ನಿವಾರಿಸಬೇಕಿದೆ.

ರಾಜ್ಯದಿಂದ 25 ಸಂಸದರು ಬಿಜೆಪಿ ಪ್ರತಿನಿಧಿಸುತ್ತಿ ರುವುದರಿಂದ ಸಾಧ್ಯವಾದಷ್ಟೂ ಅನುಕೂಲ ಪಡೆಯ ಲು ಪ್ರಯತ್ನಿಸಬೇಕಾಗಿದೆ ಎಂದು ರೈಲ್ವೆ ಹೋರಾಟ ಸಮಿತಿಯ ಕೃಷ್ಣ ಪ್ರಸಾದ್‌ ಹೇಳುತ್ತಾರೆ.
ಉದ್ಯೋಗ ಖಾತರಿ: ರಾಜ್ಯವು ಸತತ ಬರಗಾಲಕ್ಕೆ ತುತ್ತಾಗುತ್ತಿರುವುದರಿಂದ ರೈತಾಪಿ ಸಮುದಾಯ ಕೇಂದ್ರದಿಂದ ಸಾಕಷ್ಟು ನಿರೀಕ್ಷಿಸುತ್ತಿದೆ. ವಾಣಿಜ್ಯ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಸೇರಿದಂತೆ ಕೃಷಿ ಯಂತ್ರೋಪಕರಣ, ರಸಗೊಬ್ಬರಗಳ ಮೇಲೆ ಸಬ್ಸಿಡಿ ಬಯಸುತ್ತಿದೆ. ಕಾಫಿ, ದಾಳಿಂಬೆ ಸೇರಿ ವಾಣಿಜ್ಯ ಬೆಳೆಗಾರರು ಸಹ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು, ವಿಶೇಷ ಪ್ಯಾಕೇಜ್‌ ನಿರೀಕ್ಷಿಸುತ್ತಿದ್ದಾರೆ. ಉದ್ಯೋಗ ಖಾತರಿ ಅಡಿ ಹೆಚ್ಚು ಜನರಿಗೆ ಉದ್ಯೋಗ ನೀಡಲು ಹೆಚ್ಚು ಮಾವನ ದಿನ ಮಂಜೂರು ಮಾಡಬೇಕಾಗಿದೆ. ಜತೆಗೆ, ಈ ಯೋಜನೆಯಡಿ ಕೂಲಿ ಹಾಗೂ ಪರಿಕರ ಬಾಬ್ತು ಕೇಂದ್ರದಿಂದ 1351 ಕೋಟಿ ರೂ. ಬರಬೇಕಿದ್ದು, ತಕ್ಷಣಕ್ಕೆ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ. ಆ ಮೊತ್ತವೂ ವಾಪಸ್‌ ಬರಬೇಕಿದೆ.

ಕೈಗಾರಿಕೆ

ಕೈಗಾರಿಕೆ ಅಭಿವೃದ್ಧಿ ನಿಟ್ಟಿನಲ್ಲೂ ಕರ್ನಾಟಕದ ವಾಣಿಜ್ಯ ಹಾಗೂ ಕೈಗಾರಿಕೆ ವಲಯ ಕೇಂದ್ರದಿಂದ ಹಲವು ರಿಯಾಯಿತಿ, ವಿನಾ ಯಿತಿ, ಪ್ಯಾಕೇಜ್‌, ಪ್ರೋತ್ಸಾಹದ ನಿರೀಕ್ಷೆಯಲ್ಲಿದೆ.
ಸಣ್ಣ ಕೈಗಾರಿಕೆಗಳು ಸೇರಿದಂತೆ ಸಣ್ಣ ಉದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಸ್ಥಳೀಯವಾಗಿ ಉದ್ಯೋಗಿ ಸೃಷ್ಟಿ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿ ಉದ್ಯೋಗಕ್ಕಾಗಿ ವಲಸೆ ಹೋಗುವುದು, ಎಲ್ಲದಕ್ಕಿಂತ ಹೆಚ್ಚಾಗಿ ವಿದ್ಯಾವಂತ ನಿರುದ್ಯೋಗಿಗಳಿಗೆ ವೃತ್ತಿ ಸಂಬಂಧಿತ ಕೌಶಲ್ಯತರಬೇತಿ ನೀಡಿ ಅವರಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಬೇಕಿದೆ. ಏಕೆಂದರೆ ರಾಜ್ಯದ ಉತ್ತರ ಕರ್ನಾಟಕ ಭಾಗ ಸೇರಿದಂತೆ ಹಿಂದುಳಿದ ತಾಲೂಕುಗಳಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿ ಬಾಧಿಸುತ್ತಿದೆ. ಹೀಗಾಗಿ, ಈ ಬಾರಿ ಕೇಂದ್ರ ಸರ್ಕಾರದಿಂದ ರಾಜ್ಯದ ಉದ್ಯಮ ವಲಯ, ವಿದ್ಯಾವಂತ ನಿರುದ್ಯೋಗಿ ಯವಸಮೂಹ, ರೈತಾಪಿ ಸಮುದಾಯ, ಸಣ್ಣ ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ.

Advertisement

ಬರಬೇಕಿದೆ ಬರ ಪರಿಹಾರ

ಕಳೆದ ವರ್ಷದ ಹಿಂಗಾರು ಹಾಗೂ ಮುಂಗಾರು ಅವಧಿಯಲ್ಲಿ ಮಳೆ ಕೊರತೆ ಹಾಗೂ ಬರ ಹಿನ್ನೆಲೆಯಲ್ಲಿ ಉಂಟಾಗಿರುವ ನಷ್ಟದಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 176 ತಾಲೂಕುಗಳಲ್ಲಿ 156 ತಾಲೂಕುಗಳು ಬರಪೀಡಿತ ಎಂದು ಘೋಷಿಸಿಲಾಗಿದ್ದು , ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡಲ್ಲಿಯೂ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಭವಿಸಿದ ನಷ್ಟ 32,325 ಕೋಟಿ ರೂ. ಎಂದು ಅಂದಾಜಿಸಲಾಗಿದೆ.ಇದು ರಾಜ್ಯದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಮುಂಗಾರು ಹಂಗಾಮಿನ ನಷ್ಟಕ್ಕೆ ಸಂಬಂಧಿಸಿದಂತೆ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ 2434 ಕೋಟಿ ರೂ. ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ 949.49 ಕೋಟಿ ರೂ. ಪರಿಹಾರ ಮಾತ್ರ ಮಂಜೂರು ಮಾಡಲಾಗಿದೆ. ಹಿಂಗಾರು ಅವಧಿಯಲ್ಲಿ 11,384.47 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದ್ದು, ಮಾರ್ಗಸೂಚಿ ಪ್ರಕಾರ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ, ತತಕ್ಷಣಕ್ಕೆ ಕೇಂದ್ರದಿಂದ ಬರ ಪರಿಹಾರದ ನಿರೀಕ್ಷೆಯಲ್ಲಿದೆ. ಚುನಾವಣೆಗೆ ಮುಂಚೆಯೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದರೂ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಪರಿಹಾರ ಬಿಡುಗಡೆ ಆಗಿರಲಿಲ್ಲ.

ರಾಜ್ಯಕ್ಕೇನು ಸಿಕ್ಕಿತು?

ಧಾರವಾಡದಲ್ಲಿ ಐಐಟಿ. ಸ್ಥಾಪನೆಯಾಗಿದ್ದು, ಶೈಕ್ಷಣಿಕ ಚಟುವಟಿಕೆಗಳು ಕಾರ್ಯಾರಂಭವಾಗಿದೆ.

ಮೈಸೂರಿನ ಬೆಳವಾಡಿ ಸಮೀಪ 50 ಕೋಟಿಗೂ ಅಧಿಕ ರೂ.ವೆಚ್ಚದಲ್ಲಿ ಮೆಗಾ ಸಿಲ್ಕ್ ಕ್ಲಸ್ಟರ್‌ ಆರಂಭವಾಗಲಿದೆ.
ಬೆಂಗಳೂರು, ಬೆಳಗಾವಿ, ಚಿತ್ರದುರ್ಗದಲ್ಲಿ ವರ್ತುಲ ರಸ್ತೆ, ಬಳ್ಳಾರಿ, ಹೊಸಪೇಟೆ, ರಾಯಚೂರು, ಬಾಗಲಕೋಟೆಯಲ್ಲಿ ಬೈಪಾಸ್‌ ರಸ್ತೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

ಚೆನ್ನೈ-ಬೆಂಗಳೂರು-ತುಮಕೂರು-ಚಿತ್ರದುರ್ಗ ಇಂಡಸ್ಟ್ರಿಯಲ… ಕಾರಿಡಾರ್‌, ಬೆಂಗಳೂರು-ಮುಂಬೈ ಎಕನಾಮಿಕ್‌ ಕಾರಿಡಾರ್‌ ತುಮಕೂರು ಮೂಲಕ ಹಾದುಹೋಗಲಿದೆ. ತುಮಕೂರಿಗೆ ಪವರ್‌ ಗ್ರಿಡ್‌, ಹೆಲಿಕ್ಯಾಪ್ಟರ್‌ ಉತ್ಪಾದನಾ ಘಟಕವೂ ಮೋದಿ ಸರ್ಕಾರದಿಂದ ಬಂದಿದೆ.

ಹಾಸನ- ಬೆಂಗಳೂರು ನಡುವಿನ ರೈಲು ಯೋಜನೆಗೆ ಮೋದಿ ಸರ್ಕಾರ ಬಂದ ನಂತರ ಮುಕ್ತಿ ದೊರೆತಿದೆ. ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ನಿವಾರಣೆಗಾಗಿ ರೂಪಿಸಿದ್ದ ಸಬ್‌ ಅರ್ಬನ್‌ ರೈಲು ಯೋಜನೆಗೆ ಚಾಲನೆ ಸಿಕ್ಕಿದ್ದು, ಇದಕ್ಕಾಗಿ 17 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಲಿದೆ. ಬೀದರ್‌-ಕಲುºರ್ಗಿ ರೈಲ್ವೇ ಮಾರ್ಗದ ಉದ್ಘಾಟನೆಯೂ ಆಗಿದೆ.
ಕನ್ನಡಿಗರಿಗೆ ಇದೇ ಮೊದಲ ಬಾರಿಗೆ ರೈಲ್ವೇ ಪರೀಕ್ಷೆ ಕನ್ನಡದಲ್ಲಿಯೇ ಬರೆಯಲು ಅವಕಾಶ.

ಕರ್ನಾಟಕದ 7 ಲಕ್ಷ ಮನೆಗಳಿಗೆ ವಿದ್ಯುತ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರಧಾನಮಂತ್ರಿ ಫ‌ಸಲ… ಬಿಮಾ ಯೋಜನೆಯಡಿಯಲ್ಲಿ ಕರ್ನಾಟಕದ ರೈತರು 11 ಸಾವಿರ ಕೋಟಿ ಪರಿಹಾರ ನೀಡಲಾಗಿದೆ.
ಕರ್ನಾಟಕದಲ್ಲಿನ ರಾಷ್ಟ್ರೀಯ ಹೆ¨ªಾರಿ ಯೋಜನೆಗಾಗಿ 27,482 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ.
ಕರ್ನಾಟಕದಲ್ಲಿ 240 ಅಧಿಕ ಜನರಿಕ್‌ ಔಷಧಿ ಕೇಂದ್ರಗಳು ತೆರೆಯಲಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಗೆ 1960 ಕೋಟಿ ಹಣ ಬಿಡುಗಡೆ. ಅಮೃತ್‌ ಯೋಜನೆಯಡಿ ನಗರಗಳ ಅಭಿವೃದ್ಧಿಗಾಗಿ 4,900 ಕೋಟಿ ರೂ., ಪ್ರಧಾನಮಂತ್ರಿ ಉಜ್ವಲ್‌ ಯೋಜನೆಯಡಿ 4,300 ಕೋಟಿ ರೂ. ಅನುದಾನ.

14ನೇ ಹಣಕಾಸು ಆಯೋಗದಿಂದ 2.19 ಲಕ್ಷ ಕೋಟಿ ರೂ. ಮಂಜೂರು.

Advertisement

Udayavani is now on Telegram. Click here to join our channel and stay updated with the latest news.

Next