ಬೆಂಗಳೂರು/ಚೆನ್ನೈ:ಕನ್ನಡಿಗರು, ಕನ್ನಡ ಹೋರಾಟಗಾರರ ವಿರುದ್ಧ ಕೆಂಡ ಕಾರುತ್ತಲೇ ಇರುವ ಬಾಹುಬಲಿಯ ಕಟ್ಟಪ್ಪ ಖ್ಯಾತಿಯ ಪಾತ್ರಧಾರಿ ತಮಿಳುನಟ ಸತ್ಯರಾಜ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ರಾಜ್ಯಾದ್ಯಂತ ಬಾಹುಬಲಿ 2 ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದೆ.
ನಟ ಸತ್ಯರಾಜ್ ಕ್ಷಮೆ ಕೇಳೋವರೆಗೂ ಬಾಹುಬಲಿ 2 ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡೋದಿಲ್ಲ ಎಂದು ಕರವೇಯ ಪ್ರವೀಣ್ ಶೆಟ್ಟಿ ತಿಳಿಸಿರುವುದಾಗಿ ವರದಿ ಹೇಳಿದೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಏಪ್ರಿಲ್ 28ರಂದು ವಿಶ್ವಾದ್ಯಂತ ತೆರೆ ಕಾಣಲು ಸಿದ್ಧವಾಗಿದ್ದು, ಮತ್ತೊಂದೆಡೆ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ನಟ ಸತ್ಯರಾಜ್ ನಟನೆಯ ಬಾಹುಬಲಿ 2 ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಲ್ಲ ಎಂದು ಕರವೇ ಎಚ್ಚರಿಕೆ ನೀಡಿದೆ.
ತಮಿಳುನಾಡಿನಲ್ಲಿ ಕನ್ನಡ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುವ ಸತ್ಯರಾಜ್, ಉದ್ರೇಕಕಾರಿ ಭಾಷಣ ಮಾಡುವ ಮೂಲಕ ಸತ್ಯರಾಜ್ ತಮಿಳರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಿದ್ದಾರೆ. ಕಾವೇರಿ ವಿವಾದ ವಿಚಾರದಲ್ಲಿ ಕನ್ನಡಿಗರ ವಿರುದ್ಧ ಸತ್ಯರಾಜ್ ಕೆಂಡ ಕಾರಿ ಈ ಹಿಂದೆ ಮಾಡಿರುವ ಭಾಷಣದ ತುಣುಕು ಇಲ್ಲಿದೆ.
‘ಕರ್ನಾಟಕದಲ್ಲಿ ತಮಿಳರನ್ನು ಹೊಡೆದು ಸಾಯಿಸ್ತಾ ಇದ್ದಾರೆ. ಅದನ್ನು ವಿರೋಧಿಸಲು ಬಂದಿದ್ದೇನೆ. ಹೆಚ್ಚು ಸಂಭಾವನೆ ಪಡೆದು ನಟಿಸೋ ಹೀರೋ ಹೆಸರು ಹೇಳಿ ಜೈ ಅನ್ನಿಸಿಕೊಳ್ಳೋದು ಜೀವ ತೆಗೆದರೂ ನನ್ನಿಂದ ಸಾಧ್ಯವಿಲ್ಲ. ನಾನು ನನಗನ್ನಿಸಿದ್ದನ್ನು ಮಾತಾಡ್ತೀನಿ. ಇದು ಜಗತ್ತಿನಲ್ಲಿರುವ ಹತ್ತು ಕೋಟಿ ತಮಿಳರಿಗೂ ಹೋಗಿ ಸೇರಬೇಕು. ಇದನ್ನು ಇಷ್ಟ ಇದ್ದರೆ ಕೇಳಿಸಿಕೊಳ್ಳಿ ಇಲ್ಲದಿದ್ದರೆ ಎದ್ದುಹೋಗಿ. ತಮಿಳರನ್ನು ಕನ್ನಡದವರು ಮನುಷ್ಯರೆಂದು ಭಾವಿಸಿಲ್ಲ. ಅವರು ನಮ್ಮನ್ನು ಒಂದು ಮರವೆನ್ನುವ ರೀತಿಯಲ್ಲಿ ಭಾವಿಸಿದ್ದಾರೆ. ಒಂದು ಮರ ಸಿಕ್ಕರೆ ನಾಯಿಗಳು ಏನು ಮಾಡುತ್ತವೆ? ಕಾಲೆತ್ತಿಕೊಂಡು ಉಚ್ಚೆ ಹುಯ್ಯುತ್ತವೆ.
ಗಾಂಧೀಜಿ ಒಮ್ಮೆ ಹೇಳಿದ್ದರು; ಒಬ್ಬರ ಕಣ್ಣನ್ನು ಒಬ್ಬರು ಕೀಳುತ್ತಾ ಇದ್ದರೆ ಜಗತ್ತಿನಲ್ಲಿರೋ ಅಷ್ಟೂ ಜನ ಕುರುಡರಾಗುತ್ತಾರೆ. ಈ ಕಾರಣದಿಂದ ಯಾರೂ ಯಾವುದೇ ಸಂದರ್ಭದಲ್ಲೂ ಹೊಡೆದಾಟಕ್ಕಿಳಿಯಬೇಡಿ ಅಂತ. ನಾವು ಗಾಂಧಿ ಮಾತನ್ನೇ ನಂಬಿಕೊಂಡು ಕೂತಿದ್ದಕ್ಕೆ ಏನಾಯ್ತು?
ಮಹಾರಾಷ್ಟ್ರದಲ್ಲಿ ಭಾಳಾ ಠಾಕ್ರೆ ಅನ್ನೋನು ಮೊದಲ ಬಾರಿಗೆ ತಮಿಳಿಗರ ಕಣ್ಣು ಕೀಳಲು ಆರಂಭಿಸಿದ. ನಂತರ ಮಲೇಶಿಯಾದಲ್ಲಿ, ಆಮೇಲೆ ಶ್ರೀಲಂಕಾದಲ್ಲಿ ತಮಿಳಿಗರ ಕಣ್ಣು ಕಿತ್ತರು. ಈಗ ಕನ್ನಡಿಗರು ತಮಿಳಿಗರ ಕಣ್ಣು ಕೀಳಲು ಶುರು ಮಾಡಿದ್ದಾರೆ. ಹೀಗೇ ಆದರೆ ಜಗತ್ತಿನ ಜನಸಂಖ್ಯೆಯಲ್ಲಿ ಹತ್ತು ಕೋಟಿ ತಮಿಳರು ಮಾತ್ರ ಕುರುಡರಾಗಿರುತ್ತಾರೆ. ಮಿಕ್ಕವರು ಮಾತ್ರ ಸುತ್ತ ನಿಂತು ನಮ್ಮ ಅಂಧತ್ವವನ್ನು ನೋಡುತ್ತಿರುತ್ತಾರೆ. ಮೊದಲೇ ತಮಿಳರು ಬುದ್ಧಿ ಮತ್ತು ಚಿಂತನೆಯಲ್ಲಿ ಕುರುಡರಾಗಿ ತಿರುಗುವಂತಾಗಿದೆ.”