Advertisement

Karnataka: ಮುದ್ರಾಂಕ ಶುಲ್ಕ ಭಾರಿ ಪ್ರಮಾಣದ ಏರಿಕೆ

11:30 PM Dec 07, 2023 | Team Udayavani |

ಬೆಳಗಾವಿ: ಮದ್ಯ, ಮೋಟಾರು ವಾಹನ ತೆರಿಗೆ, ಜನನ-ಮರಣ ನೋಂದಣಿ ಶುಲ್ಕ, ಮಾರ್ಗಸೂಚಿ ದರ ಹೆಚ್ಚಳದ ಬಳಿಕ ಈಗ ಮುದ್ರಾಂಕ ಶುಲ್ಕದ ಏರಿಕೆ ಸರದಿ. ಅದು ಹಲವು ಪಟ್ಟು ಹೆಚ್ಚಳ ಆಗಲಿದೆ.

Advertisement

ವಿಧಾನಸಭೆಯಲ್ಲಿ ಗುರುವಾರ ಈ ಸಂಬಂಧ ಸರಕಾರ ಕರ್ನಾಟಕ ಸ್ಟಾಂಪ್‌ (ತಿದ್ದುಪಡಿ) ಮಸೂದೆ -2023 ಅನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಮಂಡಿಸಿದರು.

ತಿದ್ದುಪಡಿ ಮಸೂದೆ ಪ್ರಕಾರ ಸಾಲದ ಕರಾರು ಪತ್ರ, ಅಡಮಾನ, ದತ್ತು, ಹಸ್ತಾಂತರ ಪ್ರಮಾಣಪತ್ರ, ಒಪ್ಪಂದ ಪತ್ರ ಸೇರಿ 54 ನೋಂದಣಿಯೇತರ ದಾಖಲೆಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಕನಿಷ್ಠ ಎರಡರಿಂದ ನಾಲ್ಕಾರುಪಟ್ಟು ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ.

ದತ್ತು ಪ್ರಮಾಣಪತ್ರದ ಮುದ್ರಾಂಕ ಶುಲ್ಕವು 500ರಿಂದ 1,000 ರೂಗಳಿಗೆ ಹೆಚ್ಚಳವಾಗಲಿದೆ. ಅಫಿದವಿತ್‌ಗಳ ಶುಲ್ಕ 20ರಿಂದ 100 ರೂ.ಗಳಿಗೆ, 1 ಲಕ್ಷದ ವರೆಗಿನ ಚಿಟ್‌ಫ‌ಂಡ್‌ ಒಪ್ಪಂದದ ಮುದ್ರಾಂಕ ಶುಲ್ಕವನ್ನು 100ರಿಂದ 500 ರೂ.ಗಳಿಗೆ, 1 ಲಕ್ಷದ ವರೆಗಿನ ಸಾಲದ ಒಪ್ಪಂದದ ಮೇಲಿನ ಮುದ್ರಾಂಕ ಶುಲ್ಕವನ್ನು ಶೇ. 0.1ರಿಂದ ಶೇ 0.5ಕ್ಕೆ ಹೆಚ್ಚಿಸುವ ಬಗ್ಗೆ ಮಸೂದೆಯಲ್ಲಿ ಉಲ್ಲೇಖೀಸಲಾಗಿದೆ.
ಕಂಪೆನಿ ಆರಂಭಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳಿಗೆ ಪ್ರಸ್ತುತ 10 ಲಕ್ಷದಿಂದ 50 ಲಕ್ಷ ರೂ.ವರೆಗಿನ ಮೌಲ್ಯದ ಕಂಪೆನಿಗಳಿಗೆ ಪ್ರತಿ ಹತ್ತು ಲಕ್ಷಕ್ಕೆ 1,000 ರೂ. ಶುಲ್ಕವಿದೆ. ಇನ್ಮುಂದೆ ಅದನ್ನು ಪ್ರತಿ 10 ಲಕ್ಷದಿಂದ 1 ಕೋಟಿ ರೂ. ವರೆಗಿನ ಮೌಲ್ಯದ ಕಂಪೆನಿಗಳಿಗೆ ಪ್ರತಿ 10 ಲಕ್ಷಕ್ಕೆ 5,000 ರೂ. ಶುಲ್ಕ ವಿಧಿಸುವ ಪ್ರಸ್ತಾವ ಮಾಡಲಾಗಿದೆ.

ವಿವಾಹ ವಿಚ್ಛೇದನ ಪ್ರಮಾಣಪತ್ರ, ವಿಭಾಗಪತ್ರ, ಬಾಂಡ್‌ಗಳು, ಗುತ್ತಿಗೆ ಒಪ್ಪಂದಗಳೂ ಈ ಮಸೂದೆ ವ್ಯಾಪ್ತಿ ಯಲ್ಲಿವೆ. ಕಂಪೆನಿ ಆರಂಭಕ್ಕೆ ಸಂಬಂಧಿಸಿದ ಒಪ್ಪಂದ, ಚಿಟ್‌ಫ‌ಂಡ್‌ ಒಪ್ಪಂದಗಳು ಮುಂತಾದವುಗಳ ಮುದ್ರಾಂಕ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾವವೂ ಮಸೂದೆಯಲ್ಲಿದೆ.

Advertisement

ಈ ಹಿಂದೆ ಕರ್ನಾಟಕಕ್ಕೆ ಹೋಲಿಸಿದರೆ ಇತರ ರಾಜ್ಯಗಳಲ್ಲಿ ಮುದ್ರಾಂಕ ಶುಲ್ಕದ ಪ್ರಮಾಣ ಜಾಸ್ತಿಯಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಮುದ್ರಾಂಕ ಶುಲ್ಕದಲ್ಲಿ ಹೆಚ್ಚಿಸಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು.

ರಾಜ್ಯದ ಹಲವೆಡೆ ಅಂತರ್ಜಲ ಮಟ್ಟ ಕುಸಿತ
ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದ್ದು, ಈ ಬಗ್ಗೆ ಅಧ್ಯಯನ ಮಾಡಿ ಸೂಕ್ತ ಶಿಫಾರಸು ಮಾಡಲು ತಜ್ಞರನ್ನೊಳಗೊಂಡ ಜಲ ಪರಿಶೋಧನೆ ಸಮಿತಿ (ವಾಟರ್‌ ಆಡಿಟ್‌ ಕಮಿಟಿ) ರಚಿಸಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ವಿಧಾನಸಭೆಯಲ್ಲಿ ಗುರುವಾರ ಬರಗಾಲದ ಮೇಲೆ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಬರ ನಿರ್ವಹಣೆಯಲ್ಲಿ ಲೋಪವಾಗದಂತೆ ಹಾಗೂ ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಸರಕಾರ ಮುನ್ನೆಚ್ಚರಿಕೆ ವಹಿಸಿದೆ. ಪ್ರತಿ ಜಿಲ್ಲಾ ಪಂಚಾಯತ್‌ನ ಗ್ರಾಮೀಣ ಕುಡಿಯುವ ನೀರಿಗಾಗಿ 1 ಕೋಟಿ ರೂ. ಅನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next