Advertisement
ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿ ದಂತೆ 2015ರಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು. ಕೋರ್ಟ್‌ನಲ್ಲಿ ಖುದ್ದು ಹಾಜರಿದ್ದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಕುರಿತು ನ್ಯಾಯ ಪೀಠ, ರಸ್ತೆಗುಂಡಿಗಳಿಂದ ಜೀವ ಹಾನಿಯಾಗುತ್ತಿದ್ದರೂ, ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ನಿಮ್ಮ ಇಂಜಿನಿಯರ್‌ಗಳು ಉದ್ದೇಶಪೂರ್ವಕವಾಗಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ರಸ್ತೆ ದುರಸ್ತಿ ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಸರ್ಕಾರ ಪಾಲಿಕೆಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡುತ್ತಿದೆ. ಹೀಗಿದ್ದರೂ, ರಸ್ತೆಗಳು ಸರಿಯಾಗುತ್ತಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿತು.
ರಸ್ತೆಗುಂಡಿ ಸಮಸ್ಯೆಗೆ ಪರಿಹಾರವಷ್ಟೇ ಬೇಕು ಎಂದ ನ್ಯಾಯಪೀಠ, ಅಧಿಕಾರಿಗಳು ತಮ್ಮ ಕೆಲಸ ನಿರ್ವಹಿಸಲಾಗದಷ್ಟು ಅಸಮರ್ಥರಾಗಿದ್ದರೆ, ಎಂಜಿನಿಯರ್‌ಗಳನ್ನೇ ಬದಲಿಸಲು ಸರ್ಕಾರಕ್ಕೆ
ಆದೇಶಿಸುತ್ತೇವೆ ಎಂದು ಎಚ್ಚರಿಕೆ ನೀಡಿತು. ಇದನ್ನೂ ಓದಿ : ಹೈಕೋರ್ಟ್ ಎಂದರೆ ಏನೆಂದು ತೋರಿಸುತ್ತೇವೆ : ಪಾಲಿಕೆ ಅಧಿಕಾರಿಗಳನ್ನು ಜೈಲಿಗಟ್ಟುವ ದಿನ ಸನಿಹ
Related Articles
ರಸ್ತೆ ಗುಂಡಿ ಮುಚ್ಚಲು ಸುಧಾರಿತ ತಂತ್ರಜ್ಞಾನ ಬಳಸದೇ ಇರುವುದರಿಂದಲೇ ಸಮಸ್ಯೆ ನಿರಂತರವಾಗಿದ್ದು, ಜನರು ರಸ್ತೆಯಲ್ಲಿ ಸಾಯುತ್ತಿದ್ದಾರೆ. ನಗರದ 182 ಕಿ.ಮೀ. ಗಳಷ್ಟು ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಮಾತ್ರ ಪೈಥಾನ್ ಬಳಸಲಾಗುತ್ತಿದ್ದು, ಉಳಿದ ಕಡೆ ಹಾಟ್‌ಮಿಕ್ಸ್ ತಂತ್ರಜ್ಞಾನ ಬಳಸುವುದು ಸರಿಯಲ್ಲ. ಎಲ್ಲ ರಸ್ತೆಗಳಲ್ಲೂ ಪೈಥಾನ್ ಬಳಕೆ ಸಾಧ್ಯವಿಲ್ಲವೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಪಾಲಿಕೆ ಪರ ವಕೀಲರು ಉತ್ತರಿಸಿ, ದೇಶದಲ್ಲಿ ಕೇವಲ ಎರಡು ಪೈಥಾನ್ ಯಂತ್ರಗಳಿದ್ದು, ಒಂದು ಬೆಂಗಳೂರಿನಲ್ಲಿದೆ. ಪ್ರಮುಖ ರಸ್ತೆಗಳು ಹಾಗೂ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಅದನ್ನು ಬಳಸಲಾಗುತ್ತಿದೆ ಎಂದರು. ಆಗ, ನೀವೇ ಏಕೆ ಪೈಥಾನ್ ಯಂತ್ರ ಖರೀದಿಸಬಾರದು ಎಂದು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ಬಿಬಿಎಂಪಿ ಪರ ವಕೀಲರು, ಈ ಬಗ್ಗೆ ಸರ್ಕಾರದ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದರು. ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಸುಧಾರಿತ ತಂತ್ರಜ್ಞಾನ
ಬಳಸಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಹೊಸ ಕಾರ್ಯ ವಿಧಾನ ಪ್ರಮಾಣಪತ್ರ ಸಲ್ಲಿಸಲು ಪಾಲಿಕೆಗೆ ಒಂದು ವಾರ ಕಾಲಾವಕಾಶ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮಾ.15ಕ್ಕೆ ಮುಂದೂಡಿತು.
Advertisement