Advertisement
ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ ಭರವಸೆಯಂತೆ ರೈತರ ಸಂಪೂರ್ಣ ಸಾಲ ಮನ್ನಾ ಘೋಷಿಸಬೇಕು ಎಂದು ಹಮ್ಮಿಕೊಂಡ ಬಂದ್‌ಗೆ ಜಿಲ್ಲಾ ಕೇಂದ್ರ ಮಾತ್ರವಲ್ಲದೇ ವಿವಿಧ ತಾಲೂಕು ಮತ್ತು ಹೋಬಳಿಯಲ್ಲೂ ಕಿಂಚಿತ್ತೂ ಪ್ರತಿಕ್ರಿಯೆ ಕಂಡುಬರಲಿಲ್ಲ. ಜನಜೀವನ, ಸಾರಿಗೆ, ವ್ಯಾಪಾರ ವಹಿವಾಟು ಎಂದಿನಂತಿದ್ದರೆ, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಹೋರಾಟದ ಕೇಂದ್ರ ಬಿಂದುವಾದ ರೈತಾಪಿ ವರ್ಗ, ರೈತ ಸಂಘಟನೆಗಳು, ಮುಖಂಡರೇ ದೂರ ಸರಿದ ಕಾರಣ ಬಂದ್ ಹೋರಾಟಕ್ಕೆ ಸೀಮಿತ ಎನ್ನುವಂತಾಯಿತು. ಬಿಜೆಪಿ ಮುಖಂಡರು, ಕಾರ್ಯಕರ್ತರು ಮಾತ್ರ ಬಜಾರ್‌ನಲ್ಲಿ ಬಲವಂತದಿಂದ ಅಂಗಡಿ ಮುಂಗಟ್ಟು ಮುಚ್ಚಿಸುವ ಪ್ರಹಸನ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಗರದ ರಾಜೇಂದ್ರ ಗಂಜ್ ವೃತ್ತದಲ್ಲಿ ಸೇರಿದ ಬಿಜೆಪಿ ಮುಖಂಡರು ಎಪಿಎಂಸಿ ವರ್ತಕರ ಅಂಗಡಿ, ಬಂಗಾರ ಬಜಾರ್, ಬಟ್ಟೆ ಬಜಾರ್, ಕಿರಾಣಿ ಅಂಗಡಿ ಲೈನ್, ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಮತ್ತು ಗಾಂಧಿ ವೃತ್ತದವರೆಗಿನ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಲು ಯತ್ನಿಸಿದರು. ಆ ಕ್ಷಣಕ್ಕೆ ಅಂಗಡಿಗಳನ್ನು ಮುಚ್ಚಿದ ವರ್ತಕರು ಕೆಲ ಹೊತ್ತಿನಲ್ಲಿಯೇ ಪುನಃ ಆರಂಭಿಸಿದರು. ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ವಿವಿಧ ವೃತ್ತಗಳು, ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡರು, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ, ಈಗ ಸಂಪೂರ್ಣ ಅಧಿಕಾರವಿಲ್ಲ. ಕಾಂಗ್ರೆಸ್ ನಾಯಕರನ್ನು ಕೇಳಬೇಕು ಎಂಬ ನಾಟಕ ಶುರು ಮಾಡಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಸಂಪೂರ್ಣ ಸಾಲ ಮನ್ನಾ ಮಾಡಬೇಕು.
ಇಲ್ಲವಾದಲ್ಲಿ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.
Related Articles
Advertisement