ಬೆಂಗಳೂರು : ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶದ ಮೂಲಕ ಎರಡು ವಾರಗಳ ನಂತರ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ರಾಜ್ಯ ಮಂಡಳಿಗೆ ಅನುಮತಿ ನೀಡಿ, ರಾಜ್ಯ ಸರಕಾರದ ಮೂರು ಸುತ್ತೋಲೆಗಳನ್ನು ರದ್ದುಗೊಳಿಸಿದ ಏಕ ಪೀಠದ ಆದೇಶಕ್ಕೆ ತಡೆ ನೀಡಿದೆ.
ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರ ವಿಭಾಗೀಯ ಪೀಠವು ಮಾರ್ಚ್ 10 ರ ಆದೇಶಕ್ಕೆ ತಡೆ ನೀಡಿ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ.
ನಿಗದಿತ ಪಠ್ಯಕ್ರಮದ ಹೊರಗಿರುವ ವಿಷಯಗಳಿಂದ ಯಾವುದೇ ಪ್ರಶ್ನೆಗಳನ್ನು ರಚಿಸಲಾಗಿಲ್ಲ ಎಂದು ರಾಜ್ಯ ಸರಕಾರ ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದೆ ಮತ್ತು ಫಲಿತಾಂಶಗಳನ್ನು ಶಾಲೆಗೆ ತಿಳಿಸಬೇಕು ಮತ್ತು ಸಾರ್ವಜನಿಕವಾಗಿ ಪ್ರಕಟಿಸಬಾರದು ಎಂದಿದೆ.
ಮಾರ್ಚ್ 27ರಿಂದ ಪರೀಕ್ಷೆ ಪ್ರಾರಂಭಿಸಬೇಕು ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂದು ಸೂಚಿಸಿದೆ.
ಮಾ.13 ರಿಂದ ಆರಂಭವಾಗಬೇಕಿದ್ದಬೋರ್ಡ್ ಪರೀಕ್ಷೆಗಳನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ಎಂದಿನಂತೆ ಸಾಮಾನ್ಯ ವಾರ್ಷಿಕ ಪರೀಕ್ಷೆ ನಡೆಸಬೇಕು. ಶಾಲಾ ಮಟ್ಟದಲ್ಲೇ ಮೌಲ್ಯಮಾಪನ ಮಾಡಬೇಕು ಎಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸರಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಪರೀಕ್ಷೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೈಕೋರ್ಟ್ ಮೊರೆ ಹೋಗಿದ್ದರು.