ಭಟ್ಕಳ: ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿಯಾದ ಕೆ. ನಟರಾಜನ್ ಆ.1ರ ರವಿವಾರ ಬೆಳಿಗ್ಗೆ ಭಟ್ಕಳ ನ್ಯಾಯಾಲಯ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಭಟ್ಕಳ ವಕೀಲರ ಸಂಘಕ್ಕೆ ಭೇಟಿ ನೀಡಿದ ಅವರನ್ನು ವಕೀಲರ ಸಂಘದ ವತಿಯಿಂದ ಸನ್ಮಾನಿಸಿ, ಕಟ್ಟಡ ಸಮಿತಿಯ ವತಿಯಿಂದ ನೂತನ ನ್ಯಾಯಾಲಯ ಸಂಕೀರ್ಣದ ಕಾಮಗಾರಿಯನ್ನು ಶೀಘ್ರ ಸ್ಥಾಪಿಸುವಂತೆ ಹಾಗೂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಪೀಠ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರು ಭಟ್ಕಳ ಬಾರ್ ಅಸೋಶಿಯೇಶನ್ ಚಿಕ್ಕದಾದರೂ ನ್ಯಾಯಾಂಗಕ್ಕೆ ಇದರ ಕೊಡುಗೆ ಜಾಸ್ತಿ ಇದೆ ಎಂದು ತಿಳಿದು ಸಂತೋಷವಾಗಿದೆ. ಇಲ್ಲಿನ ಕಿರಿಯ ವಕೀಲರುಗಳು ಮುಂದೆಯೂ ನ್ಯಾಯಾಂಗದ ಸೇವೆಗೆ ಸೇರುವಂತಾಗಲಿ ಎಂದು ಹಾರೈಸಿದರು.
ಭಟ್ಕಳದಲ್ಲಿ ನೂತನ ಕಟ್ಟಡವನ್ನು ಕೇಳೀದ್ದೀರಿ ಈಗಾಗಲೇ ಮಂಜೂರಿ ಹಂತದಲ್ಲಿದ್ದು ಶೀಘ್ರ ಕಟ್ಟಡವನ್ನು ಮಂಜೂರಿ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಕೇಳಿದ್ದನ್ನು ಪ್ರಸ್ತಾಪಿಸಿದ ಅವರು ಬೆಂಗಳೂರಿಗೆ ಹೋದ ನಂತರ ಈ ಬಗ್ಗೆ ಕ್ರಮ ಕೈಗೊಂಡು ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಪೀಠ ಇಲ್ಲವೇ ಇಟರಿನರಿ ಕೋರ್ಟ ಮಂಜೂರಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆಯನ್ನು ನೀಡಿದರು.
ಸಾಧಾರಣವಾಗಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಜಿಲ್ಲೆಯ ಭೇಟಿ ಸಮಯದಲ್ಲಿ ನೇರವಾಗಿ ಜಿಲ್ಲಾ ಕೇಂದ್ರಕ್ಕೆ ಭೇಟಿ ಕೊಡುವುದು ವಾಡಿಕೆ. ಆದರೆ ಸ್ಥಳೀಯ ಕೊರ್ಟುಗಳ ಸ್ಥಿತಿಗತಿಗಳನ್ನು ಅಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ನಾನು ಭಟ್ಕಳದಿಂದ ಆರಂಭಿಸಿ ಕೊನೆಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡುವ ಉದ್ದೇಶವನ್ನಿಟ್ಟುಕೊಂಡು ಬಂದಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಗಣೇಶ ಎಂ. ನಾಯ್ಕ ಅವರು ವಹಿಸಿದ್ದರು.
ಕಟ್ಟಡ ಸಮಿತಿಯ ಅಧ್ಯಕ್ಷ ಎಂ.ಎಲ್.ನಾಯ್ಕ ಅವರು ನೂತನ ಕಟ್ಟಡದ ಮಂಜೂರಿಗೆ ಹಾಗೂ ಜಿಲ್ಲಾ ನ್ಯಾಯಾಲಯದ ಪೀಠ ಸ್ಥಾಪಿಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶ ಜಿ.ಎಸ್. ಉದಯಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ, ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ ಬಾಳ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಹಿರಿಯ ನ್ಯಾಯವಾದಿ ಹಾಗೂ ನೋಟರಿ ಆರ್.ಆರ್.ಶ್ರೇಷ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದಕ್ಕೂ ಪೂರ್ವ ನ್ಯಾಯಮೂರ್ತಿ ಕೆ. ನಟರಾಜನ್ ಅವರು ನ್ಯಾಯಾಲಯ ಸಂಕೀರ್ಣದ ಕೋರ್ಟ ಹಾಲ್, ನ್ಯಾಯಾಧೀಶರ ವಸತಿಗ್ರಹ, ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಉದ್ದೇಶಿಲಾಗಿದ್ದ ಸ್ಥಳವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತ, ಹಿರಿಯ ವಕೀಲರಾದ ಜೆ.ಡಿ.ನಾಯ್ಕ, ವಿ.ಎಫ್. ಗೋಮ್ಸ್, ಎಸ್.ಬಿ. ಬೊಮ್ಮಾಯಿ, ನಾಗರಾಜ ಈ.ಎಚ್., ನಿಕಟಪೂರ್ವ ಅಧ್ಯಕ್ಷ ಪಾಂಡು ನಾಯ್ಕ, ಶಂಕರ ಕೆ. ನಾಯ್ಕ, ವಿ.ಆರ್. ಸರಾಫ್, ಎಂ.ಜೆ.ನಾಯ್ಕ,
ಸಹಾಯಕ ಸರಕಾರಿ ಅಭಿಯೋಜಕ ವಿವೇಕ ನಾಯ್ಕ, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.