ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ಹೂಡಿರುವ ಕ್ರಿಮಿನಲ್ ಮಾನನಷ್ಟ ದಾವೆಯನ್ನು ವಜಾಗೊಳಿಸುವಂತೆ ಕೋರಿ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಡಿ.ರೂಪಾ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ನಿಗದಿಯಾಗಿತ್ತು.
ಈ ವೇಳೆ ಪ್ರಕರಣದ ಬಗ್ಗೆ ಮಾಹಿತಿ ಪಡೆದ ನ್ಯಾಯಮೂರ್ತಿಗಳು ಈ ಹಿಂದೆ ವಕೀಲನಾಗಿ ತಾನು ರೋಹಿಣಿ ಸಿಂಧೂರಿ ಅವರನ್ನು ಬೇರೊಂದು ಪ್ರಕರಣದಲ್ಲಿ ಪ್ರತಿನಿಧಿಸಿರುವುದರಿಂದ ಈ ಪ್ರಕರಣದ ವಿಚಾರಣೆ ನಡೆಸುವುದಿಲ್ಲ ಎಂದು ಹಿಂದೆ ಸರಿದರು. ಹಾಗಾಗಿ, ಸೂಕ್ತ ಆದೇಶಕ್ಕೆ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಮಂಡಿಸಲು ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದರು.
ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಪರಿಗಣಿಸಿದ್ದ ಬೆಂಗಳೂರಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಡಿ. ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು 2023ರ ಮಾ.24ರಂದು ಆದೇಶಿಸಿತ್ತು. ಅಲ್ಲದೆ ರೂಪಾಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ವಜಾಗೊಳಿಸಬೇಕು ಎಂದು ರೂಪಾ ಕೋರಿದ್ದಾರೆ.
ಅಲ್ಲದೆ, ರೋಹಿಣಿ ಸಿಂಧೂರಿ ಅವರ ಖಾಸಗಿ ದೂರಿನ ಅನ್ವಯ ಐಪಿಸಿ 500ರ ಅಡಿ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ 2023ರ ಮಾರ್ಚ್ 4ರಂದು ಮಾಡಿರುವ ಆದೇಶವನ್ನು ರದ್ದುಪಡಿಸಬೇಕು. 2023ರ ಫೆ. 28ರಂದು ರೋಹಿಣಿ ಸಿಂಧೂರಿ ದಾಖಲಿಸಿರುವ ಖಾಸಗಿ ದೂರು ಹಾಗೂ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಬಾಕಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.