Advertisement

ಆರೋಗ್ಯಕರ ಸ್ಪರ್ಧೆ: ಕೇಂದ್ರದ ವಿಮೆ ಬೆನ್ನಲ್ಲೇ ರಾಜ್ಯ ಸರ್ಕಾರ ಚುರುಕು

08:13 AM Feb 03, 2018 | Team Udayavani |

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಹತ್ತು ಕೋಟಿ ಬಡ ಕುಟುಂಬಗಳಿಗೆ ಐದು ಲಕ್ಷ ರೂ. “ಆರೋಗ್ಯ ವಿಮೆ’ ಜಾರಿ ಬೆನ್ನಲ್ಲೇ ರಾಜ್ಯ ಸರ್ಕಾರ ಸಹ ಉದ್ದೇಶಿತ “ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌’ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. 
ಈ ಮೂಲಕ ಕೇಂದ್ರ ಸರ್ಕಾರದ ಯೋಜನೆಗೆ ರಾಜ್ಯ ಸರ್ಕಾರ ಆರೋಗ್ಯಕರ ಸ್ಪರ್ಧೆಗೆ ಇಳಿದಿದೆ.

Advertisement

ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಮುಖ್ಯಮಂತ್ರಿಯವರಿಗೆ ಏಕರೂಪದ ಆರೋಗ್ಯ ಸೇವೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ರಾಜ್ಯದ 1 ಕೋಟಿ 43 ಲಕ್ಷ ಕುಟುಂಬಗಳು ಒಳಪಡಲಿವೆ. “ಯುನಿವರ್ಸಲ್‌ ಹೆಲ್ತ್‌ಕಾರ್ಡ್‌’
ಯೋಜನೆ ಈ ಮಾಸಾಂತ್ಯಕ್ಕೆಲ್ಲ ಜಾರಿಗೆ ಬರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್‌ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆರೋಗ್ಯ ರಕ್ಷಣೆ ಕುರಿತಂತೆ ಇದುವರೆಗೂ ಇದ್ದ 11 ಯೋಜನೆಗಳನ್ನು ತೆಗೆದು ಹಾಕಿ ಏಕರೂಪದ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ಯೋಜನೆಗೆ 1,300
ಕೋಟಿ ರೂ. ವೆಚ್ಚವಾಗಲಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮೂಲಕ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ನಗರಾಭಿವೃದ್ಧಿ, ಪೌರಾಡಳಿತ ಮತ್ತು ಬಿಬಿಎಂಪಿ ಸಹಯೋಗದೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದರು. ಸಾರ್ವಜನಿಕರು ಆಧಾರ ಸಂಖ್ಯೆ ನೀಡಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ಪಡೆಯಬಹುದು, ಹೆಲ್ತ್‌ ಕಾರ್ಡ್‌ ಪಡೆ ಯಲು ಯಾವುದೇ ರೀತಿಯ ಶುಲ್ಕ ಪಾವತಿಸುವಂತಿಲ್ಲ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೇ.100 ಸೇವೆಯನ್ನು ಸರ್ಕಾರವೇ ನೀಡುತ್ತಿದೆ. ದ್ವಿತೀಯ ಹಂತದಲ್ಲಿ ಶೇ.30ರಷ್ಟು ಖಾಸಗಿ ವಲಯವನ್ನು ಅವಲಂಬಿಸಿದ್ದು, ಗಂಭೀರ ಕಾಯಿಲೆಗಳಿಗೆ ಶೇ. 70 ರಷ್ಟು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವ ಪರಿಸ್ಥಿತಿ ಇದೆ. ಅದನ್ನು ತಪ್ಪಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ಮೂಲಕ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾ ಗಿದೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರ ತೆರೆ ವ ಕಾರ್ಯ ಶೇ.60ರಷ್ಟು ಮುಗಿದಿದೆ. ಉಳಿದದ್ದು ಶೀಘ್ರವೇ ಪೂರ್ಣಗೊಳ್ಳಲಿದೆ ಎಂದರು. ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಹಾಗೂ ಅಲ್ಟ್ರಾ ಸೌಂಡ್‌ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಮಾರ್ಚ್‌ 1 ರೊಳಗೆ ಎಲ್ಲ ಜಿಲ್ಲಾ ಸ್ಪತ್ರೆಗಳಲ್ಲಿಯೂ ಎಂಆರ್‌ಐ ಸಿಟಿ ಸ್ಕ್ಯಾನ್‌ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ತಜ್ಞ ವೈದ್ಯರ ಕೊರತೆ: ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಸರ್ಕಾರ ಹೆಚ್ಚಿನ ಸಂಬಳ ನೀಡುತ್ತೇವೆ ಎಂದರೂ ತಜ್ಞ ವೈದ್ಯರು ಬರುತ್ತಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಿಗೆ ಎರಡು ವರ್ಷ ಗ್ರಾಮೀಣ ಕಡ್ಡಾಯ ಸೇವೆ ಮಾಡುವ ಕುರಿತು ಕೋರ್ಟ್‌ಗೆ
ಪ್ರಮಾಣಪತ್ರ ಸಲ್ಲಿಸಲಾಗಿದೆ. ರಾಜ್ಯದಲ್ಲಿ 53 ವೈದ್ಯಕೀಯ ಕಾಲೇಜುಗಳಿವೆ. ಆದರೂ ವೈದ್ಯರ ಕೊರತೆ ಇದೆ ಎಂದಾದರೆ ಖಾಸಗಿ ಕಾಲೇಜುಗಳಿಗೆ ನೈತಿಕತೆ ಇಲ್ಲವೇ ಎಂದು ಪ್ರಶ್ನಿಸಿದರು.  ಉಡುಪಿ ಹಾಗೂ ಕೋಲಾರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ನೀಡದೇ, ಖಾಸಗಿಯವರ ಸಹಕಾರದಲ್ಲಿ ಸರ್ಕಾರವೇ ನಡೆಸುತ್ತಿದೆ ಎಂದು ಹೇಳಿದರು.

ಏನಿದು ಹೆಲ್ತ್‌ಕಾರ್ಡ್‌?
ಹೆಲ್ತ್‌ಕಾರ್ಡ್‌ ಎಲ್ಲ ಮಾದರಿಯ ರೋಗ ಗಳಿಗೂ ಚಿಕಿತ್ಸೆ ಪಡೆಯಲು ಅನ್ವಯವಾಗಲಿದೆ. ಪ್ರತಿಯೊಬ್ಬ ತಮ್ಮ ಆಧಾರ್‌ ಸಂಖ್ಯೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದರೆ ಹೆಲ್ತ್‌ ಕಾರ್ಡ್‌ ಉಚಿತವಾಗಿ ನೀಡಲಾಗುತ್ತದೆ. ಈ ಕಾರ್ಡ್‌ ಬಳಕೆ ಮಾಡಲು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶವಿಲ್ಲ ಎಂದು ವೈದ್ಯರು ಬರೆದುಕೊಟ್ಟರೆ, ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸುತ್ತದೆ. ಹೆಲ್ತ್‌ ಕಾರ್ಡ್‌ ಪಡೆಯಲು ಎಪಿಎಲ್‌ ಅಥವಾ ಬಿಪಿಎಲ್‌ ಕುಟುಂಬ ಎಂಬ ಷರತ್ತು ಇಲ್ಲ.

Advertisement

ಕೇಂದ್ರ ಸರ್ಕಾರ ಆರೋಗ್ಯ ಸೇವೆಗೆ 5 ಲಕ್ಷ ರೂ. ವಿಮೆಯೋಜನೆ ಘೋಷಣೆ ಮಾಡಿದೆ. ಆದರೆ, ಕೇವಲ 2 ಸಾವಿರ ಕೋಟಿ
ಮೀಸಲಿಟ್ಟಿದೆ. ಜನರಿಗೆ ಉಚಿತ ಆರೋಗ್ಯ , ಶಿಕ್ಷಣ ಕೊಡಿಸಲು ಆಗದಿದ್ದರೆ, ಅದೊಂದು ಜವಾಬ್ದಾರಿಯುತ ಸರ್ಕಾರವಾಗಲಾರದು

ರಮೇಶ್‌ ಕುಮಾರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

∙ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಸಿಗಲಿದೆ ಉಚಿತ ವೈದ್ಯಕೀಯ ಸೇವೆ
∙ ಅಲ್ಲಿ ಲಭ್ಯವಾಗದಿದ್ದರೆ ಖಾಸಗಿ ಆಸ್ಪತ್ರೆ ಗಳಲ್ಲೂ ಚಿಕಿತ್ಸೆ ಪಡೆಯುವ ಅವಕಾಶ
∙1.43 ಕೋಟಿ ಕುಟುಂಬಗಳಿಗೆ ಅನ್ವಯ
∙ಆಧಾರ್‌ ಕಾರ್ಡ್‌ ಕೊಟ್ಟರೆ ಮಾತ್ರ ಉಚಿತ ಹೆಲ್ತ್‌ಕಾರ್ಡ್‌ ಲಭ್ಯ

Advertisement

Udayavani is now on Telegram. Click here to join our channel and stay updated with the latest news.

Next