ಬೆಳಗಾವಿ: ಬರಗಾಲ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ನಡೆಸಲು ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಹಣಕಾಸು ಇಲಾಖೆ ಜತೆ ಮಾತುಕತೆ ನಡೆಸಿ ತೀರ್ಮಾನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಶುಕ್ರವಾರ ವಿಧಾನಸಭೆ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ, ಮುಂದಿನ ನಾಲ್ಕು ದಿನ ವಾತಾವರಣದಲ್ಲಿ ಉತ್ತಮ ಮೋಡಗಳು ಇರಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೋಡ ಬಿತ್ತನೆ ಮಾಡಿದರೆ ಖಂಡಿತಾ ಮಳೆ ಬರಲಿದೆ. ಪ್ರತಿ ಬಿತ್ತನೆಯಿಂದ ಕನಿಷ್ಠ 9 ದಶಲಕ್ಷ ನೀರು ಸಿಗಲಿದೆ ಎಂದು ಕೇಂದ್ರ ಸರಕಾರವೂ ಹೇಳಿದೆ. 5-10 ಪೈಸೆಗೆ 1 ಲೀಟರ್ ನೀರು ಹರಿಸಬಹುದಾಗಿದೆ. ಪೆಟ್ರೋಲ್ ಹಾಗೂ ಪೈಲಟ್ ಖರ್ಚು ಕೊಟ್ಟರೆ ನಾನೇ ಮೋಡ ಬಿತ್ತನೆ ಮಾಡಿಸಲು ತಯಾರಿದ್ದೇನೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ.ಪಾಟೀಲ್, ಹವಾಮಾನ ಇಲಾಖೆ ಕೂಡ ಈ ಬಗ್ಗೆ ಮುನ್ಸೂಚನೆ ನೀಡಿದ್ದು, ಇಂದು, ನಾಳೆ, ನಾಡಿದ್ದು ಆಶಾಭಾವನೆ ಹುಟ್ಟಿಸಿದೆ. ಖರ್ಚಿಟ್ಟು ಮಾಡಿಸುವುದಾಗಿ ಕೋಳಿವಾಡ ಹೇಳುತ್ತಿದ್ದಾರೆ. ಈ ಬಗ್ಗೆ ಜಲಸಂಪನ್ಮೂಲ ಸಚಿವರು ಏನು ಹೇಳುತ್ತಾರೆ ನೋಡೋಣ ಎಂದರು.
ಇದಕ್ಕೆ ಉತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಹಳ ರಾಜ್ಯಗಳಲ್ಲಿ ಮೋಡ ಬಿತ್ತನೆ ಪ್ರಯೋಗಗಳನ್ನು ಮಾಡಲಾಗುತ್ತಿದೆ. ನಮ್ಮಲ್ಲೂ ಹಿಂದೆ ಈ ಪ್ರಯತ್ನಗಳು ನಡೆದಿವೆ. ಇದಕ್ಕೆ 50 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗಷ್ಟೇ ಖರ್ಚಾಗಬಹುದು. ಆದರೂ ವೆಚ್ಚದ ವಿಚಾರವಾದ್ದರಿಂದ ಹಣಕಾಸು ಇಲಾಖೆ ಜತೆಗೆ ಚರ್ಚಿಸಬೇಕಿದೆ. ಗುತ್ತಿಗೆ ಆಹ್ವಾನಿಸಬೇಕಿದೆ. ಇಲ್ಲದಿದ್ದರೆ, ನಮ್ಮ ಪಕ್ಷದವರಿಗೆ ಗುತ್ತಿಗೆ ಕೊಟ್ಟೆವು ಎಂದು ವಿಪಕ್ಷದವರು ಆರೋಪಿಸು ತ್ತಾರೆ. ಕೋಳಿವಾಡ ಪ್ರಸ್ತಾವ ಬಗ್ಗೆ ನಾನಂತೂ ಸಕಾರಾತ್ಮಕವಾಗಿ ಇದ್ದೇನೆ ಎಂದು ಭರವಸೆ ನೀಡಿದರು.
ಹಣಕಾಸು ಇಲಾಖೆ ಒಪ್ಪದಿದ್ದರೂ ಪರವಾಗಿಲ್ಲ. ಮುಖ್ಯ ಕಾರ್ಯದರ್ಶಿಗಳಿಂದ ನನಗೆ ಸರಕಾರ ಅನುಮತಿ ಕೊಡಿಸಲಿ ಸಾಕು. ನಾನೇ ಎಲ್ಲ ಖರ್ಚುಗಳನ್ನೂ ವಹಿಸಿಕೊಂಡು ಮೋಡ ಬಿತ್ತನೆ ಮಾಡಿಸಲು ತಯಾರಿದ್ದೇನೆ.
-ಪ್ರಕಾಶ್ ಕೋಳಿವಾಡ, ಕಾಂಗ್ರೆಸ್ ಶಾಸಕ