Advertisement

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

03:53 AM Jan 14, 2025 | Team Udayavani |

ಬೆಂಗಳೂರು: ಎಲ್ಲ ಸಂದರ್ಭಗಳಲ್ಲೂ ನಿಯಮವನ್ನು ಕರಾರುವಕ್ಕಾಗಿ ಜಾರಿಗೆ ತರಲು ಆಗುವುದಿಲ್ಲ. ಕೆಲವು ತುರ್ತು ಅಥವಾ ವಿಶೇಷ ಸಂದರ್ಭಗಳಲ್ಲಿ ನಿಯಮಗಳಿಗೆ ವಿನಾಯಿತಿ ನೀಡಬೇಕಾಗುತ್ತದೆ.

Advertisement

– ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎರಡೆರಡು ಹುದ್ದೆಗಳನ್ನು ಹೊಂದಿದ ಹಿನ್ನೆಲೆಯಲ್ಲಿ “ಒಬ್ಬ ವ್ಯಕ್ತಿ ಒಂದು ಹುದ್ದೆ’ ನಿಯಮದ ಬಗ್ಗೆ ಪಕ್ಷದಲ್ಲಿ ಕೇಳಿಬರುತ್ತಿರುವ ಅಪಸ್ವರಗಳಿಗೆ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಅವರ ಸಮಜಾಯಿಷಿ ಇದು.

ನಿಯಮಗಳ ಪಾಲನೆ ಆಗಬೇಕು ನಿಜ, ಇದರಲ್ಲಿ ಯಾವುದೇ ಅನುಮಾನ ಇಲ್ಲ. ಶೇ. 90ರಷ್ಟು ಅದರ ಪಾಲನೆಯೂ ಆಗುತ್ತದೆ. ಆದರೆ ಕೆಲವು ತುರ್ತು ಸಂದರ್ಭಗಳಲ್ಲಿ ಅದರಿಂದ ತುಸು ವಿನಾಯ್ತಿ ಪಡೆಯಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಪಂಚಾಯತ್‌ನಿಂದ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಪಕ್ಷ ಬಲವರ್ಧನೆಗೆ ಹೊಸರೂಪ ನೀಡಲು ತೀರ್ಮಾನಿಸಲಾಗಿದೆ. ಉದಯಪುರ ಘೋಷಣೆಯಂತೆ ಕಾರ್ಯನಿರ್ವಹಣೆಗೆ ಸೋಮವಾರದ ಪೂರ್ವಭಾವಿ ಸಭೆಯಲ್ಲಿ ಸೂಚಿಸಲಾಗಿದೆ. ಯಾರಿಗೆಲ್ಲ ಬೇರೆ ಜವಾಬ್ದಾರಿ ಇದೆಯೋ ಅವರಿಗೆ ವಿಶ್ರಾಂತಿ ನೀಡಬೇಕು. ಈ ಬಗ್ಗೆ ವರದಿ ನೀಡುವಂತೆ ಹೇಳಿದ್ದೇನೆ’ ಎಂದರು.

2025 ಅನ್ನು ಕಾಂಗ್ರೆಸ್‌ ಸಂಘಟನಾ ವರ್ಷವಾಗಿ ಘೋಷಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಪಕ್ಷದ ಆಮೂಲಾಗ್ರ ಬದಲಾವಣೆಗೆ ಪಕ್ಷ ಮುಂದಾಗಿದೆ. ಬ್ಲಾಕ್‌, ಪಕ್ಷದ ಪ್ರಮುಖ ಘಟಕಗಳು, ಜಿಲ್ಲಾ ಕಾಂಗ್ರೆಸ್‌, ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರಗಳ ಹಂತದಲ್ಲಿ ಹೊಸ ಸಮಿತಿ ರಚಿಸಲಾಗುವುದು’ ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿ, ಸಂಘಟನೆಗಾಗಿ ನಮ್ಮ ಪಕ್ಷ ಹಾಗೂ ಸರ್ಕಾರ ಇಡೀ ದಿನ ಮುಡಿಪಾಗಿಟ್ಟು ಸಭೆ ನಡೆಸಲಾಗಿದೆ. ಈ ವರ್ಷ ಪಕ್ಷ ಸಂಘಟನೆಗೆ ಆದ್ಯತೆ ನೀಡುವುದು ಹಾಗೂ ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ ಸಮಾವೇಶದ ಸಿದ್ಧತೆ ಬಗ್ಗೆ ಚರ್ಚಿಸಲಾಗಿದೆ’ ಎಂದು ತಿಳಿಸಿದರು.

Advertisement

224 ಕ್ಷೇತ್ರಗಳಿಂದ ಕನಿಷ್ಠ ಪಕ್ಷದ ನೂರು ಜನ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಬೇಕು ಎಂದು ಹೇಳಿದ್ದೇವೆ. ಈ ಐತಿಹಾಸಿಕ ಸಭೆಗೆ ಎಲ್ಲರೂ ಆಗಮಿಸಬೇಕು ಎಂದು ಆಹ್ವಾನ ನೀಡುತ್ತೇನೆ. ನಾವು ಈ ಸಮಾವೇಶಕ್ಕೆ ನೇಮಿಸಿದ್ದ ಸಮಿತಿಗಳು ತಮ್ಮ ಕಾರ್ಯ ನಿರ್ವಹಣೆ ಮಾಡಲಿವೆ. ನಮ್ಮ ಎಲ್ಲ ಪದಾಧಿಕಾರಿಗಳು ಇದೇ ಜ. 15 ಹಾಗೂ 16ರಂದು ಎಲ್ಲಾ ಕ್ಷೇತ್ರಗಳಿಗೆ ಪ್ರವಾಸ ಮಾಡಿ, ಈ ಸಮಾವೇಶದ ಪೂರ್ವಭಾವಿ ಸಭೆ ಮಾಡಲು ಸೂಚಿಸಿದ್ದೇವೆ. ಕಿತ್ತೂರು ಕರ್ನಾಟಕ ಭಾಗಕ್ಕೆ ನಮ್ಮ ಸಚಿವರು ಹಾಗೂ ಶಾಸಕರು ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ ಪೂರ್ವಭಾವಿ ಸಭೆ ನಡೆಸಲು ಸೂಚಿಸಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.