Advertisement

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

01:46 AM Sep 27, 2021 | Team Udayavani |

ಬೆಂಗಳೂರು: ರಾಜ್ಯ ಸರಕಾರವು ವಿಧಾನಸಭಾ ಕ್ಷೇತ್ರಗಳನ್ನು ಗಡಿಯಾಗಿ ಇರಿಸಿಕೊಂಡು ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಕ್ಷೇತ್ರಗಳ ಮರು ವಿಂಗಡಣೆ ಮಾಡಲು ಚಿಂತನೆ ನಡೆಸಿದೆ.

Advertisement

ರಾಜ್ಯ ಚುನಾವಣ ಆಯೋಗವು ಈಗಾಗಲೇ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಚುನಾ ವಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಕ್ಷೇತ್ರಗಳ ಮರುವಿಂಗಡಣೆ ಮಾಡಿದೆ. ಅದರ ಪ್ರಕಾರ ಕಂದಾಯ ತಾಲೂಕುಗಳನ್ನು ಗಡಿಯನ್ನಾಗಿ ಇರಿಸಿಕೊಂಡು ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಗಡಿಗಳನ್ನು ನಿಗದಿ ಮಾಡಲಾಗಿತ್ತು. ಇದುವರೆಗೆ ರಾಜ್ಯ ಚುನಾವಣ ಆಯೋಗ ಇದೇ ಮಾದರಿಯಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡುತ್ತ ಬಂದಿದೆ.

ಶಾಸಕರಿಗೆ ಅನನುಕೂಲ
ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಗಡಿ ಯನ್ನು ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿಯಲ್ಲೇ ನಿಗದಿ ಮಾಡುವುದರಿಂದ ಶಾಸಕರಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸರಕಾರದ ಹೇಳಿಕೆ. ಕೆಲವು ವಿಧಾನಸಭಾ ಕ್ಷೇತ್ರಗಳು ಎರಡು-ಮೂರು ತಾಲೂಕುಗಳನ್ನು ಒಳಗೊಂಡಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಶಾಸಕರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಒಬ್ಬ ಶಾಸಕ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವನ್ನು ಗಡಿಯಾಗಿ ಇರಿಸಿಕೊಂಡು ಗಡಿ ನಿಗದಿ ಮಾಡಿದರೆ ಶಾಸಕರಿಗೆ ಅನುಕೂಲ ಎಂದು ಸರಕಾರ ಆಲೋಚಿಸಿದೆ ಎನ್ನಲಾಗಿದೆ.

ಇದೇ ಕಾರಣಕ್ಕೆ ತಾಲೂಕು ಗಡಿಯನ್ನು ಪರಿಗಣಿಸದೆ ವಿಧಾನಸಭಾ ಕ್ಷೇತ್ರವನ್ನು ಗಡಿಯನ್ನಾಗಿ ಪರಿಗಣಿಸಿ ಶಾಸಕರಿಗೆ ಅನುಕೂಲ ಮಾಡಿಕೊಡುವ ಆಲೋಚನೆ ಸರಕಾರದ್ದು. ರಾಜ್ಯ ಸರಕಾರ ಈಗಾಗಲೇ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ ರಾಜ್‌ ಕಾಯ್ದೆಗೆ ತಿದ್ದುಪಡಿ ತಂದು ತಾಲೂಕು, ಜಿಲ್ಲಾ ಪಂಚಾ ಯತ್‌ಗಳ ಸೀಮಾ ನಿರ್ಣಯ ಆಯೋಗ ರಚಿಸಿದೆ. ಶೀಘ್ರ ಆಯೋಗದ ಅಧ್ಯಕ್ಷರು, ಸದಸ್ಯ ರನ್ನು ನೇಮಿಸಿ, ಗಡಿ ನಿರ್ಣಯ ನಿಯಮ ರೂಪಿಸಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸಚಿವರ ಆಗ್ರಹ

Advertisement

2 ತಿಂಗಳುಗಳಲ್ಲಿ ಸೀಮಾ ನಿಗದಿ
ರಾಜ್ಯ ಸರಕಾರವು ಹೊಸ ಆಯೋಗ ರಚನೆ ಮಾಡಿದ್ದು, ಶೀಘ್ರವೇ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲಿದೆ. ಎರಡು ತಿಂಗಳುಗಳ ಒಳಗೆ ಹೊಸದಾಗಿ ತಾಲೂಕು ಮತ್ತು ಜಿ.ಪಂಚಾಯತ್‌ ಕ್ಷೇತ್ರಗಳ ಗಡಿ ನಿರ್ಣಯ ಮಾಡಲು ನಿರ್ಧರಿಸಿದೆ.

ರಾಜ್ಯ ಚುನಾವಣ ಆಯೋಗ ಮಾಡಿರುವ ಕ್ಷೇತ್ರ ಮರುವಿಂಗಡನೆ ಅವೈಜ್ಞಾನಿಕವಾಗಿದೆ ಎನ್ನುವ ಕಾರಣಕ್ಕೆ ಸರಕಾರ ಸೀಮಾ ನಿರ್ಣಯ ಆಯೋಗದ ಮೂಲಕ ಹೊಸದಾಗಿ ಮರು ವಿಂಗಡಣೆಗೆ ನಿರ್ಧರಿಸಿದೆ. ರಾಜ್ಯ ಸರಕಾರವು ತಾಲೂಕು ಮತ್ತು ಜಿ.ಪಂ.ಗಳ ಗಡಿಗಳು ಯಾವ ರೀತಿ ಇರಬೇಕು ಎನ್ನುವ ನಿಯಮ ರಚಿಸಿ ಆಯೋಗಕ್ಕೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಸೀಮಾ ನಿರ್ಣಯ ಆಯೋಗ ಗಡಿ ನಿಗದಿಪಡಿಸಿ ಕ್ಷೇತ್ರಗಳ ಮರು ವಿಂಗಡಣೆ ಮಾಡಿದ ಅನಂತರ ರಾಜ್ಯ ಚುನಾವಣ ಆಯೋಗವು ಮತ್ತೆ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಪಡಿಸಬೇಕಾಗುತ್ತದೆ. ಅನಂತರ ಚುನಾವಣೆ ನಡೆಯಲಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಸರಕಾರವು 2022ರ ಜನವರಿಯಲ್ಲಿ ತಾ.ಪಂ., ಜಿ.ಪಂ. ಚುನಾವಣೆ ನಡೆಸುವ ಆಲೋಚನೆ ಹೊಂದಿದೆ ಎಂದು ತಿಳಿದುಬಂದಿದೆ.

ಸಂಭಾವ್ಯರ ಪಟ್ಟಿ ಸಿಎಂಗೆ
ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಭಾವ್ಯರ ಪಟ್ಟಿಯನ್ನು ಕಳುಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿ ರುವ ಅಧಿಕಾರಿಗಳ ಹೆಸರುಗಳನ್ನು ಶಿಫಾರಸು ಮಾಡ ಲಾಗಿದೆ ಎನ್ನ ಲಾ ಗಿದೆ. ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದವರಲ್ಲಿ ಕನ್ನಡಿಗರಿಲ್ಲ ಎನ್ನುವ ಕಾರಣಕ್ಕೆ ಎಸಿಎಸ್‌ ಆಗಿ ನಿವೃತ್ತರಾಗಿರುವ ವಿ.ಪಿ. ಬಳಿಗಾರ್‌, ಉಮೇಶ್‌, ಮಹೇಂದ್ರ ಜೈನ್‌ ಸಹಿತ ನಾಲ್ಕೈದು ಅಧಿಕಾರಿಗಳ ಹೆಸರು ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಈ ವಾರದಲ್ಲಿ ಆಯೋಗಕ್ಕೆ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ

ತಾ.ಪಂ., ಜಿ.ಪಂ. ಗಡಿ ನಿಗದಿ
ಮುಖ್ಯಾಂಶ
01ಇದುವರೆಗೆ ಕಂದಾಯ ತಾಲೂಕು ಆಧಾರದಲ್ಲಿ ತಾ.ಪಂ., ಜಿ.ಪಂ. ಕ್ಷೇತ್ರ ಗಡಿ ನಿಗದಿ.
02ಇದರಿಂದ ಅಭಿವೃದ್ಧಿ ನಡೆಸಲುಶಾಸಕರಿಗೆ ಅಡ್ಡಿ: ಸರಕಾರದ ಪ್ರತಿಪಾದನೆ.
03ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಆಧಾರದಲ್ಲಿ ಗಡಿ ನಿರ್ಣಯ ಹೊಸ ಸೂತ್ರ .
04ಸೀಮಾ ನಿರ್ಣಯ ಆಯೋಗಕ್ಕೆ ಶೀಘ್ರ ಅಧ್ಯಕ್ಷರ ನೇಮಕ, 2 ತಿಂಗಳುಗಳಲ್ಲಿ ಕ್ಷೇತ್ರ ವಿಂಗಡಣೆ.
05ಬಳಿಕ ಮೀಸಲಾತಿ ಪ್ರಕಟನೆ, 2022ರ ಜನವರಿ ಯಲ್ಲಿ ತಾ.ಪಂ., ಜಿ.ಪಂ. ಚುನಾವಣೆಗೆ ಚಿಂತನೆ.

ವಿಧಾನಸಭಾ ಕ್ಷೇತ್ರಗಳ ಗಡಿ
ಇರಿಸಿಕೊಂಡು ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ವಿಂಗಡಣೆ ಮಾಡುವ ಆಲೋಚನೆ ಇದೆ. ಇದರಿಂದ ಶಾಸಕರಿಗೆ ಕ್ಷೇತ್ರಗಳ ಅಭಿವೃದ್ಧಿಗೆ ಅನು ಕೂಲವಾಗಲಿದೆ.
– ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

ಜನಸಂಖ್ಯೆಯ ಆಧಾರದ
ಲ್ಲಿಯೇ ಗಡಿ ವಿಂಗಡಣೆ ಆಗ ಬೇಕು. ವಿಧಾನಸಭಾ ಕ್ಷೇತ್ರಗಳನ್ನು ಗಡಿ ಯಾಗಿ ಇರಿಸಿಕೊಂಡು ತಾಲೂಕು, ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಮರು ವಿಂಗಡಣೆ ಮಾಡಿದರೆ ತಾಲೂಕು ಪಂಚಾಯತ್‌ ವ್ಯವಸ್ಥೆಗೆ ಧಕ್ಕೆಯಾಗುತ್ತದೆ.
– ಕೆ.ಜಿ. ಬೋಪಯ್ಯ, ಬಿಜೆಪಿ ಶಾಸಕ

ರಾಜ್ಯ ಸರಕಾರ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಗಡಿಗಳನ್ನು ವಿಧಾನಸಭಾ ಕ್ಷೇತ್ರವಾರು ನಿಗದಿ ಮಾಡುವುದು ದುರುದ್ದೇಶದಿಂದ ಕೂಡಿದೆ. ಇದು ಚುನಾವಣೆಯನ್ನು ವಿಳಂಬ ಮಾಡುವ ತಂತ್ರವಾಗಿದೆ.
 -ಸಿ. ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಪಂಚಾಯತ್‌ರಾಜ್‌ ಪರಿಷತ್‌ ಕಾರ್ಯಾಧ್ಯಕ್ಷ

- ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next