ಬೆಂಗಳೂರು: ಧಾರಾಕಾರ ಮಳೆಗೆ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದೆ. ಕೊಡಗಿನಲ್ಲಿ ಕಾಫಿ, ಮೆಣಸು, ಅಡಕೆ ಬೆಳೆ ನಷ್ಟವಾಗಿದೆ. ಅಪಾಯದಲ್ಲಿ ಸಿಲುಕಿದವರಿಗಾಗಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಈ ವರ್ಷದ ಮಳೆಗೆ 152 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 11,421 ಮನೆಗಳಿಗೆ ಹಾನಿಯಾಗಿದೆ. 721 ಜಾನುವಾರುಗಳು ಸಾವಿಗೀಡಾಗಿವೆ. ,ಮನೆ ಕಳೆದುಕೊಂಡವರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕೊಡಗಿನಲ್ಲಿ ರಜೆ ಹಾಕದೆ ಹಲವಾರು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 24 ಗಂಟೆಯೂ ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 3, 4 ದಿನಗಳಲ್ಲಿ ವಿವರವಾದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಸುಮಾರು 30 ಗಂಜಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತುರ್ತು ಕಾರ್ಯಾಚರಣೆಗೆ ಸಮಿತಿ ರಚಿಸಲಾಗಿದೆ. . 47 ಯೋಧರು, 31 ಎನ್ ಡಿಆರ್ ಎಫ್, ಅಗ್ನಿಶಾಮಕ ದಳದ 525 ಮಂದಿ ಸೇರಿದಂತೆ ಒಟ್ಟು ಒಂದು ಸಾವಿರ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
2, 50, 000 ಲೀಟರ್ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿದೆ, ಸುಮಾರು 200ಕ್ಕೂ ಅಧಿಕ ಎಕರೆ ಜಾಗ ಭೂಕುಸಿತವಾಗಿದೆ, 2,500 ಜನರನ್ನು ರಕ್ಷಿಸಲಾಗಿದೆ. ಹಲವು ಜಿಲ್ಲೆಗಳಿಂದ ವೈದ್ಯರ ತಂಡಗಳನ್ನು ಕರೆಯಿಸಿ ಕಳುಹಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 2060 ಮಂದಿ ಆಶ್ರಯ ಪಡೆದಿದ್ದಾರೆ.
ಇಗ್ಲೋಡ್ಲು ಗ್ರಾಮಕ್ಕೆ ಸೇನಾಪಡೆ ದೌಡು:
ಸೋಮವಾರಪೇಟೆ ತಾಲೂಕಿನ ಇಗ್ಗೋಡ್ಲು ಗ್ರಾಮದ ಮೂಲಕ ಸುಮಾರು 85 ಯೋಧರು ದೌಡಾಯಿಸಿದ್ದು ಅಲ್ಲಿಂದ ಮುಕ್ಕೋಡ್ಲಿಗೆ ತೆರಳಲಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಮುಕ್ಕೋಡ್ಲುವಿನಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಕ್ಕಾಗಿ ಸೇನಾಪಡೆ ತೆರಳಿದೆ.
ಸಂಪಾಜೆಯಲ್ಲಿನ ಜನರ ಸ್ಥಳಾಂತರ, ಮಡಿಕೇರಿ ಸಕಲೇಶಪುರ ಸಮೀಪದ ಕಾಂಡನಕೊಲ್ಲಿ ಗ್ರಾಮವೇ ನಾಪತ್ತೆಯಾಗಿದೆ ಎಂದು ಮಾಧ್ಯಮದ ವರದಿ ಹೇಳಿದೆ.
ತಕ್ಷಣಕ್ಕೆ ನೂರು ಕೋಟಿ ರೂಪಾಯಿ ಬಿಡುಗಡೆ:
ಕೊಡಗು ಜಿಲ್ಲೆಗೆ ತಕ್ಷಣಕ್ಕೆ ನೂರು ಕೋಟಿ ರೂಪಾಯಿ ಬಿಡುಗಡೆಗೆ ಆದೇಶ ನೀಡಿದ್ದು, ಈಗಾಗಲೇ 30 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಏತನ್ಮಧ್ಯೆ ಸಿಎಂ ರಿಲೀಫ್ ಫಂಡ್ ಗೆ ಧನ ಸಹಾಯ ನೀಡುವಂತೆ ಮನವಿ ಮಾಡಿದ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ರಿಲೀಫ್ ಫಂಡ್ ಹಣ ದುರುಪಯೋಗವಾಗಲು ಬಿಡುವುದಿಲ್ಲ ಎಂದು ತಿಳಿಸಿದರು.