ಬೆಂಗಳೂರು: ವಿಶ್ವಾದ್ಯಂತ ತೀವ್ರವಾಗಿ ಹರಡುತ್ತಿರುವ ಕೊರೊನಾ ವೈರಸ್ ಹರಡುವಿಕೆ ತಡೆಯಲು ಬೆಂಗಳೂರು ನಗರದ ಜನತೆ ಮನೆಯಿಂದ ಹೊರ ಬರದಂತೆ ನಿಬಂìಧ ಹೇರುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಲವು ಹೊಂದಿಲ್ಲ ಎಂದು ಹೇಳಲಾಗುತ್ತಿದೆ.
ಈ ಕುರಿತು ರಾಜ್ಯ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದು ತಿಳಿದು ಬಂದಿದ್ದು, ವೈದ್ಯರು, ಪೊಲೀಸ್ ಹಾಗೂ ಪತ್ರಕರ್ತರು ಮಾತ್ರ ಕರ್ತವ್ಯದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬರಲು ಅವಕಾಶ ಕಲ್ಪಿಸಿ, ಬೇರೆ ಬೇರೆ ವೃತ್ತಿ ನಿರತರು ಹಾಗೂ ಸಾಮಾನ್ಯ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದಕ್ಕೆ ನಿರ್ಬಂಧ ಹೇರುವ ಕುರಿತು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಕೊರೋನಾ ವೈರಸ್ 2 ನೇ ಹಂತದಲ್ಲಿ ಹರಡಿದೆ. ಮೂರನೇ ಹಂತಕ್ಕೆ ತಲುಪಿರುವ ದೇಶಗಳ ಸಾಮಾನ್ಯ ಜನರ ಪರಿಸ್ಥಿತಿ ಗಂಭೀರವಾಗಿದ್ದು, ನಂತರ ನಿಯಂತ್ರಿಸಲು ಸರ್ಕಾರಕ್ಕೆ ಕಷ್ಟವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಈ ರೀತಿಯ ಆಲೋಚನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ದುಡಿಯವ ವರ್ಗ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಒಂದು ತಿಂಗಳ ವಿಶೇಷ ಪಡಿತರ ವ್ಯವಸ್ಥೆ ಕಲ್ಪಿಸಿ, ಅವರಿಗೆ ನಿತ್ಯದ ಜಿವನೋಪಾಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸುವ ಕುರಿತು ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಆಲೋಚನೆಯ ಬಗ್ಗೆ ಮುಖ್ಯಮಂತ್ರಿ. ಎಸ್. ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಹೇಳಲಾಗುತ್ತಿದ್ದು, ರಾಜ್ಯ ಸರ್ಕಾರ ಕೋರೋನಾ ಶಂಕಿತರ ಪತ್ತೆ ಹಚ್ಚಿ ಬೇರೆಯವರಿಗೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ವಿದೇಶಗಳಿಂದ ಆಗಮಿಸಿದರಲ್ಲಿ ಮಾತ್ರ ಈ ರೋಗದ ಲಕ್ಷಣಗಳು ಕಾಣಿಸುತ್ತಿದ್ದು, ರಾಜ್ಯ ಸರ್ಕಾರ ಸಂಪೂರ್ಣ ಚಟುವಟಿಕೆ ಸ್ಥಗಿತಗೊಳಿಸಲು ನಿರ್ಧರಿಸಿದರೆ, ಸರ್ಕಾರದ ಆದಾಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಅದಲ್ಲರೂ ಮಾರ್ಚ್ ತಿಂಗಳು ಹಣಕಾಸು ವರ್ಷದ ಕೊನೆಯ ತಿಂಗಳಾಗಿರುವುದರಿಂದ ಈ ತಿಂಗಳಲ್ಲಿಯೇ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ನಿರೀಕ್ಷೆ ಇಟ್ಟುಕೊಳ್ಳಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಜನರನ್ನು ಸಂಪೂರ್ಣ ಮನೆಯಲ್ಲಿಯೇ ಕೂಡಿಸುವ ಆಲೋಚನೆ ಸೂಕ್ತವಲ್ಲ. ಸೋಂಕಿತರ ಪತ್ತೆ ಹಚ್ಚಿ ರೋಗ ಹರಡದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.