Advertisement

ಅಂಗನವಾಡಿ ಪ್ರಾರಂಭಿಸಲು ರಾಜ್ಯ ಸರಕಾರ ನಿರ್ಧಾರ : ಕಾರ್ಯಕರ್ತೆಯರ ವಿರೋಧ

12:30 AM Feb 07, 2021 | Team Udayavani |

ಬೆಂಗಳೂರು: ಕೊರೊನಾ ಕಾರಣಕ್ಕೆ ಒಂದು ವರ್ಷದಿಂದ ಮುಚ್ಚಿದ್ದ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ರಾಜ್ಯ ಸರಕಾರ ಮುಂದಾಗಿದೆ.

Advertisement

ಅಂಗನವಾಡಿ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಿ 3ರಿಂದ 6 ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲ 30 ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಅಂಗನವಾಡಿ ಕೇಂದ್ರಗಳನ್ನು 2021ರ ಜ. 31ರೊಳಗೆ ಪ್ರಾರಂಭಿಸುವಂತೆ ಸುಪ್ರೀಂ ಕೋರ್ಟ್‌ ಜ. 13ರಂದು ನಿರ್ದೇಶನ ನೀಡಿತ್ತು.

ಇದಕ್ಕೆ ಸಿದ್ಧತೆ ನಡೆಸಲು ಫೆ. 1ರಂದು ವೀಡಿಯೋ ಕಾನ್ಫರೆನ್ಸ್‌ ನಡೆಸಿ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿತ್ತು. ಬಳಿಕ ಮಹಿಳಾ ಮತ್ತು ಮಕ್ಕಳ ಇಲಾಖೆಯ ಆಯುಕ್ತರು ಫೆ. 3ರಂದು ಸುತ್ತೋಲೆ ಹೊರಡಿಸಿದ್ದಾರೆ. ಕೋವಿಡ್‌-19 ತಾಂತ್ರಿಕ ಸಲಹಾ ಸಮಿತಿಯ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಾಕೀತು ಮಾಡಲಾಗಿದೆ. ಕಂಟೈನ್‌ಮೆಂಟ್‌ ಝೋನ್‌ ಹೊರಗೆ ಮಾತ್ರ ತೆರೆಯುವಂತೆ ಸೂಚಿಸಲಾಗಿದೆ.

ಕಾರ್ಯಕರ್ತೆಯರ ವಿರೋಧ
ಅಂಗನವಾಡಿ ಪ್ರಾರಂಭಿಸುವ ತೀರ್ಮಾನಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಂದ ವಿರೋಧ ವ್ಯಕ್ತವಾಗಿದೆ. ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ಪೋಷಣ್‌ ಅಭಿಯಾನ ಇತ್ಯಾದಿಯಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸಗಳನ್ನು ವಹಿಸಲಾಗಿದೆ. ಆದ್ದರಿಂದ ಸರಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ಆಗ್ರಹಿಸಿದ್ದಾರೆ.

ಮಾರ್ಗಸೂಚಿಗಳು
1. ಸ್ಯಾನಿಟೈಸೇಶನ್‌, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಕೊರೊನಾ ಪರೀಕ್ಷೆ ಕಡ್ಡಾಯ.
2. ಬೆಳಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಮಾತ್ರ ಚಟುವಟಿಕೆ.
3. ಅಂಗನವಾಡಿ ಕೇಂದ್ರಗಳು, ಆವರಣ, ಶೌಚಾಲಯ, ಅಡುಗೆ ಪಾತ್ರೆಗಳನ್ನು ಪ್ರತೀ ದಿನ ಶುಚಿಗೊಳಿಸಬೇಕು.
4. 6 ತಿಂಗಳಿಂದ 3 ವರ್ಷದ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರು ಹಾಜರಾಗದಂತೆ ನೋಡಿಕೊಳ್ಳಬೇಕು.
5. ಮಕ್ಕಳ ಸಂಖ್ಯೆ ಮತ್ತು ಸ್ಥಳಕ್ಕೆ ಅನುಗುಣವಾಗಿ ಕನಿಷ್ಠ 5 ಮಕ್ಕಳು ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು.
6. ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯ. ರೋಗ ಲಕ್ಷಣ ಇದ್ದಲ್ಲಿ ಪ್ರವೇಶ ಇಲ್ಲ. ಎಲ್ಲರೂ ಮಾಸ್ಕ್ ಧರಿಸಬೇಕು.
7. ಪ್ರಥಮ ಹಂತದಲ್ಲಿ ಪೂರಕ ಪೌಷ್ಠಿಕ ಆಹಾರವನ್ನು ಮನೆ ಮನೆಗೆ ನೀಡುವುದನ್ನು ಮುಂದುವರಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next