ಪಣಜಿ: ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಾದ ನಂತರ ಕಳೆದ ಸುಮಾರು 2 ತಿಂಗಳಿಂದ ಬಂದ್ ಆಗಿದ್ದ ಕರ್ನಾಟಕ-ಗೋವಾ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಮಂಗಳವಾರದಿಂದ ಪುನರಾರಂಭಗೊಂಡಿದೆ.
ಅನಮೋಡ ಘಾಟ್ ಮಾರ್ಗವಾಗಿ ಕರ್ನಾಟಕದಿಂದ ಮಂಗಳವಾರ ಬೆಳಿಗ್ಗೆ ಗೋವಾಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಆಗಮಿಸಿದೆ. ಇದರಿಂದಾಗಿ ಕಳೆದ ಸುಮಾರು ಎರಡು ತಿಂಗಳ ಹಿಂದೆ ತಮ್ಮ ಊರಿಗೆ ತೆರಳಿದ್ದ ಕರ್ನಾಟಕ ಮೂಲದ ಕಾರ್ಮಿಕರು ಗೋವಾದತ್ತ ಮುಖಮಾಡಿದ್ದಾರೆ. ಕರ್ನಾಟಕ ಗೋವಾ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದರಿಂದ ಜನರಿಗೆ ಹೆಚ್ಚಿನ ತೊಂದರೆಯುಂಟಾಗಿತ್ತು.
ಇದನ್ನೂ ಓದಿ: ಗೋವಾ ಬೆಳಗಾವಿ ಸಂಪರ್ಕ ಸೇತುವೆ: ಚೋರ್ಲಾ ಘಾಟ್‍ನಲ್ಲಿ ಗುಡ್ಡ ಕುಸಿತ
ಮಂಗಳವಾರ ಗೋವಾಕ್ಕೆ ಕೇವಲ ಉತ್ತರ ಕರ್ನಾಟಕ ಭಾಗದಿಂದ ಮಾತ್ರ ಕೆ.ಎಸ್.ಆರ್.ಟಿ.ಸಿ ಬಸ್ ಆಗಮಿಸಿದ್ದು, ಕಾರವಾರದಿಂದ ಗೋವಾಕ್ಕೆ ಯಾವುದೇ ಕೆ.ಎಸ್.ಆರ್.ಟಿ.ಸಿ ಬಸ್ ಆಗಮಿಸಿಲ್ಲ.
ಗೋವಾ ಗಡಿ ಭಾಗದಲ್ಲಿ ಹೊರ ರಾಜ್ಯದಿಂದ ಆಗಮಿಸುವ ಪ್ರಯಾಣಿಕರಿಕೆ ಗೋವಾ ಸರ್ಕಾರ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ಐಸಿಎಂಆರ್ ಪ್ರಮಾಣಿತ ಯಾವುದೇ ತಪಾಸಣಾ ವರದಿ ಖಡ್ಡಾಯಗೊಳಿಸಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಿಂದ ಗೋವಾಕ್ಕೆ ಹೇಗೆ ಬಸ್ ಆಗಮಿಸಿದೆ..? ಎಂಬುದು ಸದ್ಯ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.