ಚಿತ್ರದುರ್ಗ: ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರ ಆಗಿದ್ದು, ಕಾಂಗ್ರೆಸ್ ನಾಯಕರು ಯಾವ ಕ್ಷಣದಲ್ಲಾದರೂ ಕರೆಯಬಹುದು. ಸೂಕ್ತ ಸಂದರ್ಭ ನೋಡಿಕೊಂಡು ಒಂದೆರಡು ದಿನಗಳಲ್ಲಿ ಕಾಂಗ್ರೆಸ್ ಸೇರುತ್ತೇನೆಂದು ಕೂಡ್ಲಿಗಿ ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾಡಿಗೆ ಮನೆಯಲ್ಲಿ ಎಷ್ಟು ದಿನ ಇರೋಕಾಗುತ್ತೆ, ಹಾಗಾಗಿ ಸ್ವಂತ ಮನೆಗೆ ಹೋಗುತ್ತಿದ್ದೇನೆ. ರಾಜಕೀಯದಲ್ಲಿ ಇರಬೇಕು ಎನ್ನುವ ಇಚ್ಛೆ ಒಂದು ಕಡೆ ಇದೆ. ಸತತ ಆರು ಬಾರಿ ಶಾಸಕನಾಗಿದ್ದೇನೆ. ಮೊಳಕಾಲ್ಮೂರಿನಲ್ಲಿ 25 ವರ್ಷ ರಾಜಕಾರಣ ಮಾಡಿದ್ದೇನೆ ಎಂದರು.
ಬಿಜೆಪಿಯಲ್ಲಿ ಕೆಲವರ ಜೊತೆ ಸ್ವಲ್ಪ ಅಸಮಾಧಾನವಾಗಿತ್ತು. ಈ ಬಗ್ಗೆ ವರಿಷ್ಠರಲ್ಲಿ ನೋವು ತೋಡಿಕೊಂಡಿದ್ದೆ. ಆದರೆ ಸ್ಪಂದನೆ ಸಿಗಲಿಲ್ಲ. ಹಾಗಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ಮುಂದೆ ರಾಷ್ಟ್ರೀಯ ಪಕ್ಷದಲ್ಲೇ ಇರಬೇಕು ಎನ್ನುವುದು ನನ್ನ ಬಯಕೆ. ಅದಕ್ಕಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳಿಂದಲೂ ಮೊಳಕಾಲ್ಮೂರು ಕ್ಷೇತ್ರಕ್ಕೆ ಬರಬೇಕು ಎನ್ನುವ ಒತ್ತಡವಿತ್ತು. “ಘರ್ ವಾಪ್ಸಿ’ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಅನೇಕ ಕಾಂಗ್ರೆಸ್ ಶಾಸಕರು ನನ್ನ ಪರವಾಗಿ ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದರು. ಮೊಳಕಾಲ್ಮೂರಿನ ಸಾವಿರಾರು ಜನ ಸ್ನೇಹಿತರು ಒತ್ತಡ ಹಾಕುತ್ತಿದ್ದಾರೆ. ಕಾಂಗ್ರೆಸ್ ವರಿಷ್ಠರು ತೀರ್ಮಾನ ತೆಗೆದುಕೊಂಡು ಅವಕಾಶ ಕೊಟ್ಟರೆ ಮೊಳಕಾಲ್ಮೂರಿನಿಂದ ಸ್ಪರ್ಧೆ ಮಾಡುವ ಅಪೇಕ್ಷೆಯಿದೆ. ಎರಡನೇ ಪಟ್ಟಿಯಲ್ಲಿ ಸಂಭಾವ್ಯ ಅಭ್ಯರ್ಥಿಯಾಗಿ ನನ್ನ ಹೆಸರು ಬರುವ ಸಾಧ್ಯತೆಯಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
“ಗೋ ಬ್ಯಾಕ್’ ಸಣ್ಣತನ: ನನ್ನನ್ನು ವಿರೋಧ ಮಾಡುವವರಿಗಿಂತ ಮೊದಲು ನಾನು ಮೊಳಕಾಲ್ಮೂರು ಕ್ಷೇತ್ರದಲ್ಲಿ ಹುಟ್ಟಿದವನು. ಅವರೆಲ್ಲ 35-40 ವರ್ಷದ ಹುಡುಗರು. ನಾನು ಹುಟ್ಟಿ-ಬೆಳೆದ ತಾಲೂಕಿಗೆ ಬರುವುದು ನನ್ನ ಹಕ್ಕು. ಗೋ ಬ್ಯಾಕ್ ಗೋಪಾಲಕೃಷ್ಣ ಎನ್ನುವುದು ಸಣ್ಣತನ. ರಾಜಕಾರಣಿಗಳಿಗೆ ಇರುವ ಲಕ್ಷಣಗಳಲ್ಲ. 2018ರಲ್ಲಿ ನನಗೆ ಟಿಕೆಟ್ ಕೈತಪ್ಪಿದಾಗ ಹೀಗೆಲ್ಲಾ ನಡೆದುಕೊಂಡಿರಲಿಲ್ಲ. ಇದು ಮೊಳಕಾಲ್ಮೂರು ಕ್ಷೇತ್ರದ ಸ್ವಾಭಿಮಾನ, ಗೌರವದ ಪ್ರಶ್ನೆ. ಹೊರಗೆ ಬಂದು ಹೀಯಾಳಿಸುವ ಕೆಲಸ ಯಾವ ಪಕ್ಷದಲ್ಲೂ ಆಗಬಾರದು ಎಂದು ಪರೋಕ್ಷವಾಗಿ ಡಾ| ಯೋಗೀಶ್‌ಬಾಬು ಅವರನ್ನು ಟೀಕಿಸಿದರು.
ಪಕ್ಷದಿಂದ ಬಿ ಫಾರಂ ಕೊಡುತ್ತಾರೆ, ಚುನಾವಣೆ ಪ್ರಚಾರ ಮಾಡುತ್ತಾರೆ. ಆದರೆ ಕ್ಷೇತ್ರಕ್ಕೆ ಬನ್ನಿ ಎಂದು ಪತ್ರಕರ್ತರು ಕರೆಯುತ್ತಾರೆ. ಬಳ್ಳಾರಿ ಗ್ರಾಮಾಂತರ ಹಾಗೂ ಕೂಡ್ಲಿಗಿಗೆ ಹೋದಾಗ, ನಿಮ್ಮನ್ನು ಯಾರು ಕರೆದುಕೊಂಡು ಬಂದವರು, ಯಾವ ಧೈರ್ಯದಲ್ಲಿ ಇಲ್ಲಿ ಸ್ಪರ್ಧೆ ಮಾಡುತ್ತೀರಿ, ಯಾರು ನಿಮ್ಮನ್ನು ಗೆಲ್ಲಿಸುತ್ತಾರೆ ಎಂದು ಪ್ರಶ್ನೆಗಳನ್ನು ಕೇಳಿದ್ದರು. ಈಗ ಏನಾದರೂ ಹೆಚ್ಚು ಕಡಿಮೆಯಾದರೆ ನಿಮ್ಮ ಮೇಲೆಯೇ ಹೇಳುತ್ತೇನೆ ಎಂದು ಗೋಪಾಲಕೃಷ್ಣ ಹಾಸ್ಯ ಚಟಾಕಿ ಹಾರಿಸಿದರು. ನಾನು ರಾಜೀನಾಮೆ ಸಲ್ಲಿಸಿದ ನಂತರ ಸಾಕಷ್ಟು ಜನ ಪತ್ರಕರ್ತರು ಕರೆ ಮಾಡಿ ಪಕ್ಷ ಹಾಗೂ ಮೊಳಕಾಲ್ಮೂರಿಗೆ ಸ್ವಾಗತಿಸಿದ್ದಾರೆ ಎಂದು ತಿಳಿಸಿದರು.