ಮುಂಬಯಿ: ಸಮಾಜ ಸೇವೆ ಮಾಡುವ ತುಡಿತದೊಂದಿಗೆ ಸಮಾನ ಮನಸ್ಕರಿಂದ ಮುಲುಂಡ್‌ನಲ್ಲಿ ಹುಟ್ಟಿಕೊಂಡ ಮುಲುಂಡ್ ಫ್ರೆಂಡ್ಸ್ ಸಾಮಾಜಿಕ, ಧಾರ್ಮಿಕ, ಕ್ರೀಡೆ, ಶೈಕ್ಷಣಿಕ ಸೇವೆಗಳನ್ನು ಮಾಡುತ್ತಾ ಪ್ರಸಿದ್ಧಿಯನ್ನು ಪಡೆದಿದೆ. ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಸಹಯೋಗದೊಂದಿಗೆ ಪ್ರತಿಭಾ ಪುರಸ್ಕಾರ, ಸಮವಸ್ತ್ರ ವಿತರಣೆ ಹಾಗೂ ತಾಳಮದ್ದಳೆ ಆಯೋಜಿಸಿತ್ತು.
ಜಂಟಿ ಸಂಸ್ಥೆಗಳ ಅಧ್ಯಕ್ಷ, ನಗರದ ಸಮಾಜ ಸೇವಕ ಸುರೇಶ್ ಶೆಟ್ಟಿ ಯೆಯ್ನಾಡಿ ಅವರ ನೇತೃತ್ವದಲ್ಲಿ ಜು. 19ರಂದು ಅಪರಾಹ್ನದಿಂದ ಮುಲುಂಡ್ ಪೂರ್ವದ ಕೇಳ್ಕರ್ ಕಾಲೇಜಿನ ಸಮೀಪವಿರುವ ಮರಾಠ ಮಂಡಳ ಹಾಲ್‌ನಲ್ಲಿ ಸಮಾರಂಭವು ಜರಗಿದ್ದು, ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿ ಮುಲುಂಡ್ ವಿಪಿಎಂ ಕನ್ನಡ ಶಾಲೆಯ 2017-2018 ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಸಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಸಾಧಕರನ್ನು ಸಮ್ಮಾನಿಸಿದರು.
ಸಮಾರಂಭದ ವೇದಿಕೆಯಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ದಲ್ಲಿ ಅತಿಥಿಗಳಾಗಿ ಯಕ್ಷಮಾನಸದ ಅಧ್ಯಕ್ಷ ಶೇಖರ್ ಆರ್. ಶೆಟ್ಟಿ, ನವಿಮುಂಬಯಿ ಹೊಟೇಲ್ ಉದ್ಯಮಿ ಜಯಪ್ರಕಾಶ್ ಶೆಟ್ಟಿ, ಸೌತ್ ಸೇವಾ ಸಂಘ ಕಲೀನಾ ಅಧ್ಯಕ್ಷ ವಿಜಯ ಶೆಟ್ಟಿ, ತೌಳವಶ್ರೀ ಪ್ರಶಸ್ತಿ ವಿಜೇತ ಚಿತ್ರನಟ ಸೌರಭ್ ಸುರೇಶ್ ಭಂಡಾರಿ, ಮುಲುಂಡ್‌ನ ಉದ್ಯಮಿ ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಖ್ಯಾತ ಸಮಾಜ ಸೇವಕ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿಶುಕುಮಾರ್ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಮುಲುಂಡ್ ಫ್ರೆಂಡ್ಸ್ ಇದರ ಗೌರವ ಪ್ರಧಾನ ಕಾರ್ಯದರ್ಶಿ ಸುಂದರ್ ಶೆಟ್ಟಿ ವಾಮದಪದವು, ಗೌರವ ಕೋಶಾಧಿಕಾರಿ ವೇಣುಗೋಪಾಲ್ ಶೆಟ್ಟಿ ಇರಾ, ಜತೆ ಕಾರ್ಯದರ್ಶಿ ಏಳಿಂಜೆ ಯುವರಾಜ್ ಶೆಟ್ಟಿ, ಜತೆ ಕೋಶಾಧಿಕಾರಿ ನವೀನ್ ಹೆಗ್ಡೆ, ಸಲಹೆಗಾರ ಸುಭಾಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದು, ಸಹಕರಿಸಿದರು. ರಂಗಕಲಾವಿದ ಬಾಬಾ ಪ್ರಸಾದ್ ಅರಸ ಅವರು ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರ ನೇತೃತ್ವದಲ್ಲಿ, ಅಜೆಕಾರು ಕಲಾಭಿಮಾನಿ ಬಳಗದ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಗರುಡ ಗರ್ವಭಂಗ ತಾಳಮದ್ದಳೆ ನಡೆಯಿತು. ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಕು| ಕಾವ್ಯಶ್ರೀ ಅಜೇರು, ಚೆಂಡೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಮದ್ದಳೆಯಲ್ಲಿ ಶ್ರೀಪತಿ ನಾಯಕ್ ಅಜೇರು, ಅರ್ಥದಾರಿಗಳಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಹರೀಶ್ ಭಟ್ ಬಳಂತಿಮೊಗರು, ಶ್ಯಾಮ್ ಭಟ್ ಪಕಳಕುಂಜ, ಅವಿನಾಶ್ ಶೆಟ್ಟಿ ಉಬರಡ್ಕ ಇವರು ಪಾಲ್ಗೊಂಡಿದ್ದರು. ತುಳು-ಕನ್ನಡಿಗರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.