ನವದೆಹಲಿ: ಯಡಿಯೂರಪ್ಪನವರು ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇಂದ್ರ ಬಿ.ಜೆ.ಪಿ. ನಾಯಕರಿಗೆ ಸುಮಾರು 1800 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಸಂದಾಯ ಮಾಡಿದ್ದಾರೆಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಪಕ್ಷವು ಇಂದು ಮಾಡಿದೆ. ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲ ಅವರು ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಬಹಿರಂಗಪಡಿಸಿದರು. ಮಾತ್ರವಲ್ಲದೇ ಯಡಿಯೂರಪ್ಪ ಅವರು ಪಕ್ಷದ ಕೇಂದ್ರ ಸಮಿತಿ, ನ್ಯಾಯಾಧೀಶರಿಗೆ ಹಾಗೂ ನ್ಯಾಯವಾದಿಗಳಿಗೂ ಹಣ ಸಂದಾಯ ಮಾಡಿದ್ದಾರೆ ಎಂಬ ಆರೋಪವನ್ನೂ ಸುರ್ಜೆವಾಲ ಇದೇ ಸಂದರ್ಭದಲ್ಲಿ ಮಾಡಿದರು.
ಖಾಸಗಿ ಸುದ್ದಿ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿರುವ ತನಿಖಾ ವರದಿಯೊಂದರ ಮೂಲಕ ಯಾವ್ಯಾವ ಬಿ.ಜೆ.ಪಿ. ನಾಯಕರಿಗೆ ಎಷ್ಟೆಷ್ಟು ಹಣ ಸಂದಾಯವಾಗಿದೆ ಎಂಬ ವಿಚಾರವನ್ನು ಅಂದು ಯಡಿಯೂರಪ್ಪನವರು ಡೈರಿಯಲ್ಲಿ ಬರೆದಿಟ್ಟಿದ್ದು ಡೈರಿಯ ಪುಟಗಳಲ್ಲಿ ಯಡಿಯೂರಪ್ಪನವರದ್ದು ಎನ್ನಲಾದ ಸಹಿಯೂ ಇದೆ.
ಯಡಿಯೂರಪ್ಪನವರದ್ದು ಎನ್ನಲಾಗುತ್ತಿರುವ ಈ ಡೈರಿಯ ಕೆಲವು ಪುಟಗಳ ಪ್ರತಿಗಳನ್ನು ಸುರ್ಜೆವಾಲ ಅವರು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು. ಈ ಡೈರಿಯಲ್ಲಿ
ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ಇನ್ನು ಕೆಲವು ಬಿಜೆಪಿ ನಾಯಕರ ಹೆಸರಿದೆ ಮತ್ತು ಅವರಿಗೆಲ್ಲಾ ಎಷ್ಟೆಷ್ಟು ಹಣ ಸಂದಾಯವಾಗಿದೆ ಎಂಬ ಮಾಹಿತಿಯಿದೆ ಎನ್ನಲಾಗುತ್ತಿದೆ.
ತನ್ನ ಪಕ್ಷದ ರಾಷ್ಟ್ರೀಯ ನಾಯಕರಿಗೆ, ಕೇಂದ್ರ ಕಮಿಟಿಗೆ ಹಾಗೂ ನ್ಯಾಯಾಧೀಶರಿಗೆ ಸಂದಾಯ ಮಾಡಿರುವ ಒಟ್ಟು 1800 ಕೋಟಿ ರೂಪಾಯಿಗಳ ಮೊತ್ತದ ಲೆಕ್ಕವನ್ನು
2009ರ ಕರ್ನಾಟಕ ರಾಜ್ಯ ವಿಧಾನಮಂಡಲ ಶಾಸಕರ ಡೈರಿಯಲ್ಲಿ ಯಡಿಯೂರಪ್ಪನವರು ತಮ್ಮ ಕೈ ಬರಹದಲ್ಲಿಯೇ ಬರೆದಿಟ್ಟಿದ್ದಾರೆ ಎನ್ನಲಾಗಿರುವ ‘ಯಡಿಯೂರಪ್ಪ ಡೈರಿ’ಯ ಈ ಪುಟಗಳು 2017ರಿಂದ ಇದೀಗ ಆದಾಯ ತೆರಿಗೆ ಇಲಾಖೆಯ ವಶದಲ್ಲಿದೆ ಎಂಬ ಮಾಹಿತಿಯನ್ನು ಖಾಸಗಿ ಸುದ್ದಿ ವೆಬ್ ಸೈಟ್ ತನ್ನ ತನಿಖೆಯಿಂದ ಬಹಿರಂಗಗೊಳಿಸಿದೆ. ಈ ಡೈರಿಯಲ್ಲಿ ದಾಖಲಾಗಿರುವಂತೆ
ಯಡಿಯೂರಪ್ಪನವರು ಕೇಂದ್ರ ಬಿಜೆಪಿ ಕಮಿಟಿಗೆ 1000 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ ; ಕೇಂದ್ರ ಸಚಿವ ಅರುಣ್ ಜೇಟ್ಲಿ ಮತ್ತು ನಿತಿನ್ ಗಡ್ಕರಿ ಅವರಿಗೆ ತಲಾ 150 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಇನ್ನೋರ್ವ ಪ್ರಭಾವಿ ಸಚಿವ ರಾಜನಾಥ್ ಸಿಂಗ್ ಅವರಿಗೆ 100 ಕೋಟಿ ರೂ. ಸಂದಾಯವಾಗಿದೆ. ಇನ್ನು ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಮಾಜೀ ಸಚಿವ ಮುರಳಿ ಮನೋಹರ ಜೋಷಿ ಅವರಿಗೆ ತಲಾ 50 ಕೋಟಿ ರೂಪಾಯಿಗಳನ್ನು ನೀಡಿರುವ ಕುರಿತಾಗಿ ಬರೆದಿಡಲಾಗಿದೆ. ಇನ್ನು ಗಡ್ಕರಿ ಅವರ ಪುತ್ರನ ವಿವಾಹಕ್ಕೆ ಯಡಿಯೂರಪ್ಪನವರ ಕಡೆಯಿಂದ 10 ಕೋಟಿ ರೂಪಾಯಿ ಸಂದಾಯ ಮಾಡಿರುವ ನಮೂದು ಡೈರಿಯ ಈ ಪುಟಗಳಲ್ಲಿದೆ. ಇನ್ನು ನ್ಯಾಯಾಧೀಶರಿಗೆ 250 ಕೋಟಿ ರೂಪಾಯಿಗಳು ಮತ್ತು ವಕೀಲರಿಗೆ 50 ಕೋಟಿ ರೂಪಾಯಿಗಳನ್ನು ಸಲ್ಲಿಸಿರುವ ಕುರಿತಾಗಿ ಮಾಹಿತಿ ಇದೆಯಾದರೂ ಯಾರ ಹೆಸರನ್ನೂ ಇಲ್ಲಿ ಯಡಿಯೂರಪ್ಪನವರು ನಮೂದಿಸಿಲ್ಲದಿರುವುದು ವಿಶೇಷವಾಗಿದೆ.